ಗದಗ: ಗೋವಾ ರಾಜ್ಯಕ್ಕೆ ದುಡಿಯಲು ಹೋಗಿದ್ದ ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಕೂಲಿ ಕಾರ್ಮಿಕರು ಮತ್ತೆ ತಾಯಿನಾಡಿಗೆ ವಾಪಸ್ ಬಂದಿದ್ದಾರೆ.
ಜಿಲ್ಲೆಯ ನಾಗಾವಿತಾಂಡ, ಬೆಳಧಡಿ, ಅಡವಿಸೋಮಾಪುರ ತಾಂಡ, ಕಳಸಾಪೂರ ತಾಂಡ ಸೇರಿದಂತೆ ಅನೇಕ ಗ್ರಾಮಗಳ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಇವರಿಗೆಲ್ಲಾ ಸ್ವ ಗ್ರಾಮಗಳಿಗೆ ಬರಲು ಸಾಧ್ಯವಾಗಿರಲಿಲ್ಲ. ಸದ್ಯ ಲಾಕ್‍ಡೌನ್ ಸಡಿಲಿಕೆ ನಂತರ ಗೋವಾ ಸರ್ಕಾರ ಇವರ ಮನವಿಗೆ ಸ್ಪಂದಿಸಿ ಕದಂಬ ಬಸ್ ಮೂಲಕ ಗದುಗಿಗೆ ಕಳುಹಿಸಿದ್ದಾರೆ.
Advertisement
Advertisement
ಇಂದು ಗೋವಾ ರಾಜ್ಯದಿಂದ ಬಂದ 200ಕ್ಕೂ ಅಧಿಕ ಕಾರ್ಮಿಕರಿಗೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡ ನಂತರ ಅವರ ಊರುಗಳಿಗೆ ತಲುಪಿಸಿದರು.
Advertisement
14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಯಾರೂ ಅನಾವಶ್ಯಕವಾಗಿ ಹೊರಬರಬಾರದು, ಜೊತೆಗೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರಿಗೆ ತಿಳುವಳಿಕೆ ನೀಡಿದರು.