ಹುಬ್ಬಳ್ಳಿ: ಅಕ್ಕಿ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಸಹಾಯಕನೊಬ್ಬ ಮಾಲೀಕನಿಗೆ 5.6 ಲಕ್ಷ ರೂಪಾಯಿ ವಂಚಿಸಿದ ಘಟನೆ ಅಮರಗೋಳದಲ್ಲಿರುವ ಎಪಿಎಂಸಿ ಮಾರುಕಟ್ಟೆಯ ಎಂ.ಎಚ್ ಟ್ರೇಡರ್ಸ್ ಅಕ್ಕಿ ವ್ಯಾಪಾರದ ಅಂಗಡಿಯಲ್ಲಿ ನಡೆದಿದೆ.
ಎಚ್.ಎಸ್ ಜಲಾಲಿ ವಂಚನೆ ಮಾಡಿರುವ ಸಹಾಯಕ. ಈತ ಎಂ.ಎಚ್ ಟ್ರೇಡರ್ಸ್‍ನಲ್ಲಿ ಕಳೆದ 7 ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಅಂಗಡಿಯ ಮಾಲೀಕನಿಗೆ ಕಾಲು ಮುರಿದಿದ್ದ ಕಾರಣ ಅಂಗಡಿಯ ನಿರ್ವಹಣೆ ನೋಡಿಕೊಂಡು ಹೋಗುವಂತೆ ಜಲಾಲಿಗೆ ಹೇಳಿದ್ದನು. ಇದನ್ನೇ ದುರುಪಯೋಗಪಡಿಸಿಕೊಂಡು ಜಲಾಲಿ ಮೋಸ ಮಾಡಿದ್ದಾನೆ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
Advertisement
Advertisement
ಮಾಲೀಕ 5 ತಿಂಗಳ ಬಳಿಕ ಅಂಗಡಿಗೆ ಹೋಗಿ ನೋಡಿದಾಗ 2.4 ಲಕ್ಷ ಮೊತ್ತದ 120 ಬಾಸುಮತಿ ಅಕ್ಕಿ ಚೀಲಗಳನ್ನು ಜಲಾಲಿ ಮಾರಿಕೊಂಡು, ಹಣವನ್ನು ಬಳಸಿಕೊಂಡು ವಂಚಿಸಿರುವುದು ಗಮನಕ್ಕೆ ಬಂದಿದೆ. ವಿವಿಧ ಹೋಟೆಲ್‍ಗಳಿಂದ ಅಂಗಡಿಯ ಮಾಲೀಕನಿಗೆ ಬರಬೇಕಿದ್ದ 1.7 ಲಕ್ಷ ರೂಪಾಯಿಯನ್ನೂ ಸಂಗ್ರಹಿಸಿ ಜಲಾಲಿ ಸ್ವಂತಕ್ಕೆ ಖರ್ಚು ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಜಲಾಲಿ ಮಾಡಿದ್ದ 1.5 ಲಕ್ಷ ಸಾಲವನ್ನೂ ಅಂಗಡಿಯ ಮಾಲೀಕ ತೀರಿಸಿದ್ದನು. ಈ ಹಣವನ್ನೂ ವಾಪಸ್ ಕೊಡದೇ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಈ ಎಲ್ಲಾ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಪೊಲೀಸರಿಗೆ ದೂರು ನೀಡದೆ ಒಪ್ಪಂದ ಮಾಡಿಕೊಳ್ಳುವಂತೆ ಜಲಾಲಿಯ ಸ್ನೇಹಿತರಾದ ಸೈಯದ್, ವಾಜಿದ್, ಎಜಾಜ್ ಮತ್ತು ಪರಾನ್ ಅವರು ಅಂಗಡಿಯ ಮಾಲೀಕನಿಗೆ ಒತ್ತಡ ಹಾಕಿದ್ದಲ್ಲದೇ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ನವನಗರ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.