ಮುಂಬೈ: ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಮಹಾ ವಿಕಾಸ್ ಅಘಾಡಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಎಂವಿಎ ಮೈತ್ರಿ ಕೂಟ (MVA Alliance) ಬೆಂಬಲಿಸಿದ್ದಕ್ಕಾಗಿ ಮಹಾರಾಷ್ಟ್ರ ಜನತೆಗೆ ಧನ್ಯವಾದ ಅರ್ಪಿಸಿದರು.
ಜೊತೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar,) ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಸುಳಿವು ನೀಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಜಂಟಿಯಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಟ ದರ್ಶನ್, ಪವಿತ್ರಾ ಗೌಡ ಸೇರಿ 12 ಆರೋಪಿಗಳು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, 2022ರಲ್ಲಿ ತಮ್ಮ ಪಕ್ಷವನ್ನು ತೊರೆದು ಏಕನಾಥ್ ಶಿಂಧೆ ನೇತೃತ್ವದ ಪಾಳಯ ಸೇರಿ ಶಿವಸೇನೆ ಸರ್ಕಾರದ ವಿಭಜನೆಗೆ ಕಾರಣವಾದ ಶಾಸಕರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವುದಿಲ್ಲ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ವಿಧಾನ ಸಭೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತದೆ. ಬಿಜೆಪಿ ಎಷ್ಟು ಪೊಳ್ಳು ಎಂಬುದನ್ನು ರಾಜ್ಯದ ಜನರು ತೋರಿಸಿದ್ದಾರೆ. ಲೋಕಸಭಾ ಚುನಾವಣೆಯಿಂದ ಪ್ರಾರಂಭವಾಗಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟದ ಗೆಲುವು ಮುಂಬರುವ ಚುನಾವಣೆಗಳಲ್ಲೂ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ಎನ್‌ಡಿಎ ಮೈತ್ರಿ ಕೂಟದ ಭಾಗವಾಗಿರುವ ತಮ್ಮ ಸೋದರಳಿಯ ಅಜಿತ್ ಪವಾರ್ ಅವರನ್ನು ಮತ್ತೆ ತಮ್ಮ ಪಕ್ಷಕ್ಕೆ ತೆಗೆದುಕೊಳ್ಳುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳಿದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಕೂಟ ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಕೂಟವನ್ನು ಎದುರಿಸುವ ವಿಶ್ವಾಸವಿದೆ ಎಂದು ಪವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಮತ ಹಾಕಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ತಿದೆ – ಅಶೋಕ್
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಕೂಟವು 48 ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿತು. ಈ ಪೈಕಿ ಕಾಂಗ್ರೆಸ್ 13, ಶಿವಸೇನೆ 9, ಎನ್‌ಸಿಪಿ 8 ಸ್ಥಾನಗಳನ್ನ ಗೆದ್ದುಕೊಂಡಿತು.