CricketLatestSports

34 ಎಸೆತಗಳಲ್ಲಿ 46 ರನ್- ಟಿ20 ವಿಶ್ವಕಪ್‍ನಲ್ಲಿ ವಿಶ್ವದಾಖಲೆ ಬರೆದ 16ರ ಶೆಫಾಲಿ

Advertisements

ಮೆಲ್ಬರ್ನ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಶೆಫಾಲಿ ವರ್ಮಾ 34 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದರೊಂದಿಗೆ ಶೆಫಾಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2020ರಲ್ಲಿ ಉತ್ತಮ ಬ್ಯಾಟಿಂಗ್ ಶೆಫಾಲಿ ವರ್ಮಾ ತೋರುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ಶೆಫಾಲಿ ವರ್ಮಾ 172.72 ರ ಸರಾಸರಿಯಲ್ಲಿ ಒಟ್ಟು 114 ರನ್ ಗಳಿಸಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಪಡೆದ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.

16 ವರ್ಷದ ಶೆಫಾಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 29 ರನ್ (19 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 39 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ಇಂದಿನ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ತೋರಿದ ಶೆಫಾಲಿ 46 ರನ್ (34 ಎಸೆತ, 4 ಬೌಂಡರಿ, 3 ಸಿಕ್ಸರ್) ಚಚ್ಚಿದರು.

ಮೆಲ್ಬರ್ನ್ ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಕೊನೆಯ ಓವರಿನಲ್ಲಿ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್‍ಗೆ 133 ರನ್ ಗಳಿಸಿತ್ತು. ಆದರೆ ನ್ಯೂಜಿಲೆಂಡ್ ತಂಡವು 6 ವಿಕೆಟ್‍ಗೆ 130 ರನ್ ಗಳಿಸಿ ಸೋಲು ಕಂಡಿತು. ಈ ಮೂಲಕ ಭಾರತದ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

ಹುಡುಗರೊಂದಿಗೆ ಕ್ರಿಕೆಟ್:
ಟಿ20 ವಿಶ್ವಕಪ್ ಪಂದ್ಯದ ಸತತ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿ ಶೆಫಾಲಿ ತಮ್ಮ ಬ್ಯಾಟಿಂಗ್ ಪ್ರದರ್ಶನದ ಗುಟ್ಟನ್ನು ರಿವೀಲ್ ಮಾಡಿದ್ದಾರೆ. ಹುಡುಗರೊಂದಿಗೆ ಕ್ರಿಕೆಟ್ ಆಡಿರುವುದು ಹೆಚ್ಚು ಸಹಾಯಕವಾಯಿತು. ಈ ವೇಳೆ ಬಾಲ್ ಅನ್ನು ಹೇಗೆ ಬೌಂಡರಿ, ಸಿಕ್ಸರ್‍ಗೆ ಅಟ್ಟುವುದು ಎಂಬ ಕೌಶಲ್ಯ ತಿಳಿಯಿತು ಎಂದು ಶೆಫಾಲಿ ತಿಳಿಸಿದರು.

‘ನಾನು ಹುಡುಗರೊಂದಿಗೆ ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನನ್ನ ತಂದೆ ಹಾಗೂ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಭ್ಯಾಸದ ವೇಳೆ ಹುಡುಗರು ನನಗೆ ಬ್ಯಾಟಿಂಗ್‍ನಲ್ಲಿ ಉತ್ತಮ ತರಬೇತಿ ನೀಡಲು ಸಹಾಯ ಮಾಡಿದರು’ ಎಂದು ತಮ್ಮ ಸಾಧನೆಯ ಹಿಂದಿನ ಬಲವನ್ನು ರಿವೀಲ್ ಮಾಡಿದರು.

‘ನನ್ನ ಬ್ಯಾಟಿಂಗ್ ಪ್ರದರ್ಶನದಿಂದ ಸಂತೋಷಗೊಂಡಿದ್ದೇನೆ. ಪವರ್ ಪ್ಲೇನಲ್ಲಿ ಉತ್ತಮ ಆರಂಭವನ್ನು ನೀಡಲು ಬಯಸಿದ್ದೆ. ಹಾಗೆ ಸ್ಪಿನ್ನರ್ ಗಳಿಗಾಗಿ ನಾನು ಕಾಯುತ್ತಿದ್ದೆ’ ಎಂದು ಶೆಫಾಲಿ ವರ್ಮಾ ತಿಳಿಸಿದ್ದಾರೆ.

ಹರ್ಮನ್‍ಪ್ರೀತ್ ವೈಫಲ್ಯ:
ಈ ಟೂರ್ನಿಯಲ್ಲಿ ಹರ್ಮನ್‍ಪ್ರೀತ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಎರಡಂಕಿ ಅಂಕಿ ರನ್ ದಾಟುವಲ್ಲಿ ಹರ್ಮನ್‍ಪ್ರೀತ್ ವಿಫಲರಾಗಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 2 ರನ್ ಗಳಿಸಿದೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 8 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ 1 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

ಎ ಗುಂಪಿನಲ್ಲಿ ಭಾರತಕ್ಕೆ ಅಗ್ರಸ್ಥಾನ:
ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ 6 ಅಂಕಗಳೊಂದಿಗೆ ಗ್ರೂಪ್-ಎ ಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯವನ್ನು 7 ವಿಕೆಟ್‍ಗಳಿಂದ ಗೆದ್ದಿದ್ದ ನ್ಯೂಜಿಲೆಂಡ್, ಭಾರತದ ವಿರುದ್ಧದ ಎರಡದಲ್ಲಿ ಸೋಲು ಕಂಡು 2 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.

Leave a Reply

Your email address will not be published.

Back to top button