Women’s T20 World Cup: 4 ಬಾರಿ ಸೋಲುಣಿಸಿದ ತಂಡದ ವಿರುದ್ಧವೇ ಭಾರತದ ಸೆಮಿಫೈನಲ್

Public TV
3 Min Read
Womens T20 World Cup

ಮೆಲ್ಬರ್ನ್: ವೆಸ್ಟ್ ಇಂಡೀಸ್ ವಿರುದ್ಧ 46 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್‍ಗೆ ಎಂಟ್ರಿ ಕೊಟ್ಟಿರುವ ಇಂಗ್ಲೆಂಡ್ ತಂಡವನ್ನು ಭಾರತದ ಗುರುವಾರ ಎದುರಿಸಲಿದೆ.

ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್‍ಗೆ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಲಗ್ಗೆ ಇಟ್ಟಿವೆ. ವೆಸ್ಟ್ ಇಂಡೀಸ್ ತಂಡವನ್ನು ಇಂಗ್ಲೆಂಡ್ 46 ರನ್ ಗಳಿಂದ ಹಾಗೂ ದಕ್ಷಿಣ ಆಫ್ರಿಕಾ 17 ರನ್‍ಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಇಂಗ್ಲೆಂಡ್ ಸತತ 5ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ 6 ವರ್ಷಗಳ ನಂತರ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ತಂಡ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಗ್ರೂಪ್ ‘ಎ’ ನಲ್ಲಿ ಆಸ್ಟ್ರೇಲಿಯಾ ಕೂಡ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

ಮಹಿಳಾ ಟಿ20 ವಿಶ್ವಕಪ್ ಭಾಗವಾಗಿ ಇಂಗ್ಲೆಂಡ್ ಹಾಗೂ ಭಾರತದ ನಡುವೆ ಗುರುವಾರ ಸೆಮಿಫೈನಲ್ ಪಂದ್ಯ ನಡೆಯಲಿದೆ. ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಕಠಿಣ ಸವಾಲು ಎದುರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ಭಾರತದ ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ ಆಡಿವ ಕಳೆದ 5 ಪಂದ್ಯದಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ.

ಭಾರತೀಯ ಮಹಿಳಾ ತಂಡವು ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಆದರೆ ಈವರೆಗೂ ಫೈನಲ್‍ಗೆ ಪ್ರವೇಶಿಸಿಲ್ಲ. ಭಾರತವು 2009, 2010 ಮತ್ತು 2018ರಲ್ಲಿ ಸೆಮಿಫೈನಲ್ ತಲುಪಿತ್ತು. ಆದರೆ ಯಾವುದೇ ಪಂದ್ಯಗಳಲ್ಲಿ 120 ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‍ಗೆ ವಿಶೇಷ ಗಮನ ನೀಡಬೇಕಾಗಿದೆ. ಟೀಂ ಇಂಡಿಯಾ ಲೀಗ್‍ನ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆದರೆ ಯಾವುದೇ ಪಂದ್ಯದಲ್ಲೂ ತಂಡಕ್ಕೆ 150 ಕ್ಕೂ ಅಧಿಕ ರನ್ ದಾಖಲಿಸಿಲ್ಲ.

ಭಾರತವು ಬಾಂಗ್ಲಾದೇಶ ವಿರುದ್ಧದ 142 ರನ್ ಗಳಿಸಿತ್ತು. ಈ ಟೂರ್ನಿಯಲ್ಲಿ ಭಾರತದ ಅತ್ಯಧಿಕ ಸ್ಕೋರ್ ಇದಾಗಿದೆ. ಭಾರತ 2009ರ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 93 ರನ್ ಗಳಿಸಿತ್ತು.

ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 132 ರನ್, ಬಾಂಗ್ಲಾದೇಶ ವಿರುದ್ಧ 142 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧ 133 ರನ್ ಗಳಿಸಿತ್ತು. ಕೊನೆಯದಾಗಿ ಶ್ರೀಲಂಕಾ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಭಾರತವು 14.4 ಓವರ್ ಗಳಲ್ಲಿ 116 ರನ್ ಪೇರಿಸಿತ್ತು. ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳ ಪೈಕಿ ಭಾರತದ ಬ್ಯಾಟಿಂಗ್ ಸರಾಸರಿಯು ಕೆಟ್ಟದಾಗಿದೆ. ಅಷ್ಟೇ ಅಲ್ಲದೆ ಭಾರತದ ಯಾವುದೇ ಆಟಗಾಗರು ಒಂದೇ ಒಂದು ಅರ್ಧಶತಕ ಗಳಿಸಿಲ್ಲ.

ಭಾರತೀಯ ಮಹಿಳಾ ತಂಡ ಬೌಲಿಂಗ್ ಪ್ರಾಬಲ್ಯ:
ಟೀಂ ಇಂಡಿಯಾ ಬೌಲರ್ ಗಳು ವಿಶ್ವಕಪ್‍ನಲ್ಲಿ ಗರಿಷ್ಠ 30 ವಿಕೆಟ್‍ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಆಟಗಾರರು 27 ವಿಕೆಟ್, ಆಸ್ಟ್ರೇಲಿಯಾ ಬೌಲಿಂಗ್ ಪಡೆ 24 ವಿಕೆಟ್ ಮತ್ತು ದಕ್ಷಿಣ ಆಫ್ರಿಕಾ ಬೌಲರ್ ಗಳು 24 ವಿಕೆಟ್ ಕಿತ್ತಿದ್ದಾರೆ. ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 9 ವಿಕೆಟ್ ಪಡೆದಿದ್ದಾರೆ.

ಮಂದಾನ- ಕೌರ್ ವೈಫಲ್ಯ:
ಭಾರತ ತಂಡದ ಓಪನರ್ ಸ್ಮೃತಿ ಮಂದಾನ ಹಾಗೂ ನಾಯಕಿ ಹರ್ಮನ್‍ಪ್ರೀತ್ ಕೌರ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಮಂದನಾ ಕೇವಲ 38 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 17 ರನ್ ಆಗಿದೆ. ಹರ್ಮನ್‍ಪ್ರೀತ್ ನಾಲ್ಕು ಪಂದ್ಯಗಳಲ್ಲಿ 26 ರನ್ ಗಳಿಸಿದ್ದಾರೆ. ಅವರು ಶ್ರೀಲಂಕಾ ವಿರುದ್ಧ ಗಳಿಸಿದ 15 ರನ್ ಗಳಿಸಿದ್ದರು. ಮತ್ತೊಂದೆಡೆ ಶೆಫಾಲಿ ವರ್ಮಾ ಅವರು 4 ಪಂದ್ಯಗಳಲ್ಲಿ ತಂಡದ ಪರ ಅತಿ ಹೆಚ್ಚು 161 ರನ್ ಗಳಿಸಿದ್ದಾರೆ. ಜೆಮಿಮಾ ರೊಡ್ರಿಗಸ್ 85 ರನ್ನ ಹಾಗೂ ಆಲ್‍ರೌಂಡರ್ ದೀಪ್ತಿ ಶರ್ಮಾ 83 ರನ್ ದಾಖಲಿಸಿ ತಂಡಕ್ಕೆ ಆಸರೆ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *