ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ (Women Reservation Bill) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಮಸೂದೆಗೆ ಕಾನೂನು ರೂಪ ಸಿಕ್ಕಿದ್ದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ನೀಡಲಿದೆ. ಮುಂದಿನ ಜಾತಿಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡಣೆಯಾಗಲಿದ್ದು, ಆ ಬಳಿಕವಷ್ಟೆ ಈ ಕಾನೂನು ಜಾರಿಗೆ ಬರಲಿದೆ ಎಂದು ಗೆಜೆಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ
Advertisement
Advertisement
ಸೆಪ್ಟೆಂಬರ್ 20 ರಂದು ಮಸೂದೆಯನ್ನು ಅಂಗೀಕರಿಸಲಾಯಿತು. 454 ಸದಸ್ಯರು ಮಸೂದೆ ಪರವಾಗಿ ಮತ ಚಲಾಯಿಸಿದರು. ಮಸೂದೆ ವಿರುದ್ಧ ಇಬ್ಬರು ಮತ ಚಲಾಯಿಸಿದ್ದರು. ಸೆಪ್ಟೆಂಬರ್ 21 ರಂದು, ನಾರಿ ಶಕ್ತಿ ವಂದನ್ ಅಧಿನಿಯಮವನ್ನು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.
Advertisement
ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi) ಈ ಮಸೂದೆಯನ್ನು ವಿಶೇಷ ಅಧಿವೇಶನ ಕರೆದು ಮಂಡಿಸಿತ್ತು. ಹೊಸ ಸಂಸತ್ ಭವನದಲ್ಲಿ ಮಂಡನೆಯಾದ ಈ ಮೊದಲ ಮಸೂದೆಗೆ ಬಹುತೇಕ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಯಾವುದೇ ತಕರಾರು ಇಲ್ಲದೇ ಇದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿತ್ತು.
Advertisement
ಮಸೂದೆಯ ಚರ್ಚೆಯ ಸಮಯದಲ್ಲಿ ಜಾತಿ ಗಣತಿ, ಕ್ಷೇತ್ರ ಪುನರ್ ವಿಂಗಡಣೆ ವರೆಗೂ ಕಾಯದೇ ಶೀಘ್ರವಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ವಿಪಕ್ಷಗಳು ಮನವಿ ಮಾಡಿದ್ದವು. ಆದರೆ ಇದಕ್ಕೆ ಉತ್ತರಿಸಿದ್ದ ಸರ್ಕಾರ ಆರ್ಟಿಕಲ್ 334 ಎ ಪ್ರಕಾರ ಜನಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡನೆಯಾಗಲಿದ್ದು, ಬಳಿಕವೇ ಕಾನೂನು ಜಾರಿಗೆ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿತ್ತು.
ಐತಿಹಾಸಿಕ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಿ.ಟಿ. ಉಷಾ ಸೇರಿದಂತೆ ಸಂಸತ್ತಿನ ಉಭಯ ಸದನಗಳ ಮಹಿಳಾ ಸದಸ್ಯರು ಮತ್ತು ಕೇಂದ್ರ ಸಚಿವರಾದ ಮೀನಕಾಶಿ ಲೇಖಿ, ಸ್ಮೃತಿ ಇರಾನಿ ಹೂಗುಚ್ಛ ನೀಡಿ ಸಂತಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಐತಿಹಾಸಿಕ ನಿರ್ಣಯ – ಸರ್ವಾನುಮತದಿಂದ ಮಹಿಳಾ ಮೀಸಲಾತಿ ಬಿಲ್ ಪಾಸ್
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2010 ರಲ್ಲಿ ರಾಜ್ಯಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಅದು ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.
Web Stories