ಮುಂಬೈ: ಗ್ರೇಸ್ ಹ್ಯಾರಿಸ್ (Grace Harris) ಸಿಕ್ಸರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ (UP Warriorz) ತಂಡವು ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡ 3ನೇ ತಂಡವಾಗಿದೆ.
ಇತ್ತ ಸತತ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್ ಪ್ರವೇಶಿಸುವ ಕನಸು ಕಂಡಿದ್ದ ಆರ್‌ಸಿಬಿಗೆ ನಿರಾಸೆಯಾಗಿದ್ದು, ಮನೆಕಡೆಗೆ ಮುಖ ಮಾಡಿದೆ. ಇದನ್ನೂ ಓದಿ: ಸೋಫಿ ಬೆಂಕಿ ಬ್ಯಾಟಿಂಗ್ – RCBಗೆ 8 ವಿಕೆಟ್‌ಗಳ ಭರ್ಜರಿ ಜಯ
Advertisement
Advertisement
ಸೋಮವಾರ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. 179 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಯುಪಿ ವಾರಿಯರ್ಸ್ ಇನ್ನೂ ಒಂದು ಎಸೆತ ಬಾಕಿಯಿರುವಂತೆಯೇ 181 ರನ್ ಚಚ್ಚಿ ಗೆಲುವು ಸಾಧಿಸಿತು.
Advertisement
ಕೊನೆಯ 2 ಓವರ್‌ನಲ್ಲಿ 21 ರನ್‌ಗಳ ಅವಶ್ಯಕವಿದ್ದಾಗ 19ನೇ ಓವರ್‌ನಲ್ಲಿ ಸಿಕ್ಸರ್, ಬೌಂಡರಿ ನೆರವಿನೊಂದಿಗೆ 12 ರನ್ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ ಮೊದಲ ಎಸೆತದಲ್ಲಿ 2 ರನ್, 2-3ನೇ ಎಸೆತಗಳಲ್ಲಿ ತಲಾ ಒಂದೊಂದು ರನ್ ಸೇರ್ಪಡೆಯಾಯಿತು. ನಂತರ ಕ್ರೀಸ್ ಉಳಿಸಿಕೊಂಡ ಸೋಫಿ ಎಕ್ಲಿಸ್ಟೋನ್ 5ನೇ ಎಸೆತವನ್ನು ಬೌಂಡರಿಗಟ್ಟಿ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದರು.
Advertisement
ಚೇಸಿಂಗ್ ಆರಂಭಿಸಿದ ಯುಪಿ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಒಂದಾದ ತಾಲಿಯಾ ಮೆಕ್‌ಗ್ರಾತ್ ಹಾಗೂ ಗ್ರೇಸ್ ಹ್ಯಾರಿಸ್ (Grace Harris) ಜೋಡಿ ಬೃಹತ್ ಮೊತ್ತ ಕಲೆಹಾಕಿ ತಂಡದ ಗೆಲುವಿಗೆ ಕಾರಣವಾಯಿತು. ಈ ಜೋಡಿ 53 ಎಸೆತಗಳಲ್ಲಿ 78 ರನ್ ಚಚ್ಚಿ ತಂಡವನ್ನು ಉತ್ತಮ ಸ್ಥಿತಿಗೆ ತಂದಿತು. ನಡುವೆ ಜೊತೆಗೂಡಿದ ಸೋಫಿ ಎಕ್ಲಿಸ್ಟೋನ್ ಅಜೇಯ 19 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಹ್ಯಾರಿಸ್ 41 ಎಸೆತಗಳಲ್ಲಿ ಭರ್ಜರಿ 72 ರನ್ (7 ಬೌಂಡರಿ, 4 ಸಿಕ್ಸರ್) ಚಚ್ಚಿದರೆ, ತಾಲಿಯಾ 38 ಎಸೆತಗಳಲ್ಲಿ 11 ಬೌಂಡರಿ ಸಹಿತ 57 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.
ಗುಜರಾತ್ ಪರ ಕಿಮ್ ಗಾರ್ಥ್ 2 ವಿಕೆಟ್ ಪಡೆದರೆ, ಮೋನಿಕಾ ಪಾಟಿಲ್, ಆಶ್ಲೀ ಗಾರ್ಡ್ನರ್, ತನುಜಾ ಕನ್ವರ್, ಸ್ನೇಹ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು ಆಶ್ಲೀ ಗಾರ್ಡ್ನರ್ (Ashleigh Gardner) ಹಾಗೂ ದಯಾಳನ್ ಹೇಮಲತಾ ಭರ್ಜರಿ ಅರ್ಧ ಶತಕಗಳ ನೆರವಿನಿಂದ 178 ರನ್ ಕಲೆಹಾಕಿತ್ತು. ಆರಂಭಿಕರಾಗಿ ಸೋಫಿ ಡಂಕ್ಲಿ 23 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹೇಮಲತಾ 57 ರನ್ (6 ಬೌಂಡರಿ, 3 ಸಿಕ್ಸರ್ ಹಾಗೂ ಗಾರ್ಡ್ನರ್ 39 ಎಸೆತಗಳಲ್ಲಿ 60 ರನ್ (6 ಬೌಂಡರಿ, 3 ಸಿಕ್ಸರ್) ಚಚ್ಚಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ವಾರಿಯರ್ಸ್ ಪರ ರಾಜೇಶ್ವರಿ ಗಾಯಕ್ವಾಡ್, ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಕಿತ್ತರೆ, ಅಂಜಲಿ ಸರ್ವಾನಿ, ಸೋಫಿ ಎಕ್ಲಿಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.
ಆರ್‌ಸಿಬಿ ಮನೆಗೆ: ಟೂರ್ನಿಯ ಆರಂಭಿಕ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್‌ಸಿಬಿ), ಕೊನೆಯ 2 ಪಂದ್ಯಗಳಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡಿತ್ತು. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಜೊತೆ ಸಂಭಾಷಣೆ ನಡೆಸಿದ ಬಳಿಕ ಬೆಂಗಳೂರು ತಂಡ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಕಮ್‌ಬ್ಯಾಕ್ ಮಾಡಿತ್ತು. ತನ್ನ 6ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಪಡೆದಿದ್ದ ಆರ್‌ಸಿಬಿ, ನಂತರ ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿತ್ತು.
ಮುಂಬೈ, ಡೆಲ್ಲಿ ಈಗಾಗಲೇ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿದ್ದು, 3ನೇ ಸ್ಥಾನಕ್ಕೆ ಸೆಣಸಾಟ ನಡೆದಿತ್ತು. 6 ಪಂದ್ಯಗಳನ್ನಾಡಿದ್ದ ಯುಪಿ ವಾರಿಯರ್ಸ್ ಇನ್ನೆರಡು ಪಂದ್ಯಗಳಲ್ಲಿ ಸೋತು, ಆರ್‌ಸಿಬಿ ಒಂದು ಪಂದ್ಯ ಗೆದ್ದಿದ್ದರೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೆ, ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ರೋಚಕ ಜಯ ಸಾಧಿಸಿದ್ದು, ಪ್ಲೇ ಆಫ್ ಪ್ರವೇಶಿಸಿದೆ. ಆರ್‌ಸಿಬಿಗೆ ಇನ್ನೊಂದು ಪಂದ್ಯ ಬಾಕಿಯಿದ್ದು, ಗೆದ್ದರೂ ಸೋತರೂ ಆರ್‌ಸಿಬಿ ಮನೆಗೆ ತೆರಳುವುದು ಖಚಿತವಾಗಿದೆ.