ಮುಂಬೈ: ಶ್ರೇಯಾಂಕಾ ಪಾಟೀಲ್ 5 ಗೊಂಚಲು ವಿಕೆಟ್ ಸಾಧನೆ ಹಾಗೂ ರಾಧಾ ಯಾದವ್, ರಿಚಾ ಘೋಷ್ ಅವರ ಶತಕದ ಜೊತೆಯಾಟ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ, ಗುಜರಾತ್ ಜೈಂಟ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ಮೂಲಕ ಅಜೇಯ ಓಟ ಮುಂದುವರಿಸಿದೆ.
ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. 183 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ 18.5 ಓವರ್‌ಗಳಲ್ಲಿ 150 ರನ್‌ಗಳಿಗೆ ಸರ್ವಪತನ ಕಂಡು, ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಚಿನ್ನಸ್ವಾಮಿಗೆ 4 ಕೋಟಿ ವೆಚ್ಚದಲ್ಲಿ ಆರ್‌ಸಿಬಿಯಿಂದ 350 AI ಕ್ಯಾಮೆರಾ – ಬೆಂಗಳೂರಿನಲ್ಲೇ ಪಂದ್ಯ?

ಚೇಸಿಂಗ್ ಆರಂಭಿಸಿದ ಗುಜರಾತ್ ಮೊದಲ 3 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೇ 32 ರನ್ ಬಾರಿಸಿತ್ತು. ಆದ್ರೆ 4ನೇ ಓವರ್‌ನಲ್ಲಿ ಸೋಫಿ ಡಿವೈನ್ ವಿಕೆಟ್ ಬೀಳುತ್ತಿದ್ದಂತೆ ಪೆವಲಿಯನ್ ಪರೇಡ್ ಶುರುವಾಯಿತು. ಬಳಿಕ ಬೆತ್ ಮೂನಿ, ಕ್ಯಾಪ್ಟನ್ ಆಶ್ಲೆ ಗಾರ್ಡ್ನರ್ ಅವರ ವಿಕೆಟ್ ಪತನಗೊಂಡವು. ಇದರೊಂದಿಗೆ ಆರ್‌ಸಿಬಿ ಪುಟ್ಟಿ ಶ್ರೇಯಾಂಕಾ ಪಾಟೀಲ್ ಅವರ ಸ್ಪಿನ್ ಮ್ಯಾಜಿಕ್ ಗುಜರಾತ್ ತಂಡದ ವಿರುದ್ಧ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊನೆಗೆ ಗುಜರಾತ್ 150 ರನ್‌ಗಳಿಗೆ ಆಲೌಟ್ ಆಯಿತು.
ಗುಜರಾತ್ ಪರ ಭಾರತಿ ಫುಲ್ಮಾಲಿ 39 ರನ್, ತನುಜಾ ಕನ್ವರ್ 21 ರನ್ ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ ಮೊತ್ತಕ್ಕೆ ಔಟಾದರು. ಇದನ್ನೂ ಓದಿ: ʻನನಗೆ ಸೂರ್ಯಕುಮಾರ್ ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!

ಮೊದಲ ಓವರ್‌ನಲ್ಲೇ 23 ರನ್, ಬಳಿಕ ವಿಕೆಟ್ ಪತನ
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಗ್ರೇಸ್ ಹ್ಯಾರಿಸ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಮೊದಲ ಓವರ್‌ನಲ್ಲೇ 23 ರನ್ ಕಲೆಹಾಕಿತ್ತು. ಹ್ಯಾರಿಸ್ ವಿಕೆಟ್ ಬೀಳುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ಶುರುವಾಯಿತು. ಪವರ್ ಪ್ಲೇ ನಲ್ಲೇ 5.3 ಓವರ್‌ಗಳಲ್ಲಿ 43 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಆರ್‌ಸಿಬಿ ಸಂಕಷ್ಟಕ್ಕೀಡಾಯಿತು.

ಆ ಬಳಿಕ ಮದ್ಯಮ ಕ್ರಮಾಂಕದಲ್ಲಿ ಜೊತೆಯಾದ ರಾಧಾ ಯಾದವ್ ಹಾಗೂ ರಿಚಾ ಘೋಷ್ ಶತಕದ ಜೊತೆಯಾಟ ನೀಡುವ ಮೂಲಕ ತಂಡದ ಮೊತ್ತ ಹೆಚ್ಚಿಸಿದ್ರು. ಇದೇ ವೇಳೆ ರಾಧಾ ಯಾದವ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಫಿಫ್ಟಿ ಬಾರಿಸಿ ಮಿಂಚಿದರು. ರಾಧಾ ಯಾದವ್ 47 ಎಸೆತಗಳಲ್ಲಿ 66 ರನ್ ಚಚ್ಚಿದ್ರೆ, ರಿಚಾ 28 ಎಸೆತಗಳಲ್ಲಿ ಸ್ಫೋಟಕ 44 ರನ್, ನದಿನೆ ಡಿ ಕ್ಲಾರ್ಕ್ 12 ಎಸೆತಗಳಲ್ಲಿ 26 ರನ್, ಗ್ರೇಸ್ ಹ್ಯಾರಿಸ್ 8 ಎಸೆತಗಳಲ್ಲಿ 17 ರನ್ ಕೊಡುಗೆ ನೀಡಿದ್ರು. ಇದನ್ನೂ ಓದಿ: ಬಾಂಗ್ಲಾ ಆಟಗಾರರ ದಂಗೆ – ಟಿ20 ಲೀಗ್ ಸ್ಥಗಿತ, ತಮೀಮ್‌ಗೆ ಭಾರತೀಯ ಏಜೆಂಟ್ ಎಂದಿದ್ದ ಅಧಿಕಾರಿ ವಜಾ

