ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

Public TV
2 Min Read
DCvsMI

ಮುಂಬೈ: ಸಾಂಘಿಕ ಬೌಲಿಂಗ್‌ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 18 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು. 106 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ 15 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿ ಸುಲಭ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಅಗ್ರ ಸ್ಥಾನಕ್ಕೇರಿತು.

Yastika Bhatia

ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥ್ಯೂಸ್‌ (Hayley Matthews), ಯಸ್ತಿಕಾ ಭಾಟಿಯಾ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದರೂ ಉತ್ತಮ ರನ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಮುಂಬೈ ಮೊದಲ ವಿಕೆಟ್‌ ಪತನಕ್ಕೆ 8.5 ಓವರ್‌ಗಳಲ್ಲಿ 65 ರನ್‌ ಕಲೆಹಾಕಿತು. ಈ ವೇಳೆ ಯಸ್ತಿಕಾ ಭಾಟಿಯಾ 32 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 41 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಹೇಲಿ ಮ್ಯಾಥ್ಯೂಸ್‌ ಸಹ 31 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 32 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಜೊತೆಗೂಡಿದ ನ್ಯಾಟ್ ಸ್ಕಿವರ್-ಬ್ರಂಟ್ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಸ್ಕಿವರ್‌ 19 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್‌ ಚಚ್ಚಿದರೆ, ಕೌರ್‌ 11 ರನ್‌ ಗಳಿಸಿದರು. ಇತರೇ ರೂಪದಲ್ಲಿ 2 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

MIvsDC

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮುಂಬೈ ಬೌಲರ್‌ಗಳ ದಾಳಿಗೆ ತತ್ತರಿಸಿತು. ಶಫಾರ್ಲಿ ವರ್ಮಾ (Shafali Verma) ಕೇವಲ 2 ರನ್‌ಗಳಿಸಿ ಔಟಾಗುವ ಮೂಲಕ ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಳಿಕ ಏಕಾಂಗಿ ಹೋರಾಟ ನಡೆಸಿದ ನಾಯಕಿ ಮೆಗ್‌ ಲ್ಯಾನಿಂಗ್‌ 41 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 43 ರನ್‌ ಗಳಿಸಿದರು. ಇದರೊಂದಿಗೆ ಜೆಮಿಮಾ ರೊಡ್ರಿಗಸ್‌ 25 ರನ್‌ (18 ಎಸೆತ, 3 ಬೌಂಡರಿ) ಗಳಿಸಿ ಸಾತ್‌ ನೀಡಿದರು. ಕೊನೆಯಲ್ಲಿ ಕ್ರೀಸ್‌ಗಿಳಿದ ರಾಧಾ ಯಾದವ್‌ 10 ರನ್‌ ಗಳಿಸಿದ್ರೆ, ಉಳಿದ ಎಲ್ಲ ಬ್ಯಾಟರ್‌ಗಳು ಒಂದಂಕಿ ರನ್‌ಗಳಿಸಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

Mumbai Indians

ಪರಿಣಾಮ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ರನ್‌ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 105 ಗಳಿಸಿ ಮುಂಬೈಗೆ ಸುಲಭ ತುತ್ತಾಯಿತು.

ಬೌಲರ್‌ಗಳ ಕಮಾಲ್‌: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸಾಂಘಿಕ ಪ್ರದರ್ಶನ ನೀಡಿದ ಬೌಲರ್‌ಗಳು ಅತ್ಯಲ್ಪ ಮೊತ್ತಕ್ಕೆ ಡೆಲ್ಲಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸೈಕಾ ಇಶಾಕ್, ಇಸೀ ವಾಂಗ್ ಹಾಗೂ ಹೇಲಿ ಮ್ಯಾಥ್ಯೂಸ್ ತಲಾ 3 ವಿಕೆಟ್ ಕಬಳಿಸಿದರೆ, ಪೂಜಾ ವಸ್ತ್ರಾಕರ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *