ಮುಂಬೈ: ಆಶ್ಲೀ ಗಾರ್ಡ್ನರ್ (Ashleigh Gardner) ಆಲ್‌ರೌಂಡರ್ ಆಟ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಗುಜರಾತ್ ಜೈಂಟ್ಸ್ (Gujarat Giants) ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ.
ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ ಓವರ್‌ಗಳಲ್ಲಿ 147 ರನ್ ಗಳಿಸಿತು. 148 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.4 ಓವರ್‌ಗಳಲ್ಲಿ ಸರ್ವಪತನ ಕಂಡು 11 ರನ್‌ಗಳ ಸೋಲು ಅನುಭವಿಸಿತು. ಇದನ್ನೂ ಓದಿ: ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನ್ನಿಂಗ್ (Meg Lanning) ಮತ್ತು ಶಫಾಲಿ ವರ್ಮಾ (Shafali Verma) ಸೇರಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಶಫಾಲಿ ವರ್ಮಾ 8 ರನ್ ಗಳಿಸಿ ಔಟಾದರೆ, ಮೆಗ್ ಲ್ಯಾನ್ನಿಂಗ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಲಿಸ್ ಕ್ಯಾಪ್ಸೆ 11 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 22 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಲ್‌ರೌಂಡರ್ ಮಾರಿಜಾನ್ನೆ ಕಪ್ 29 ಎಸೆತಗಳಲ್ಲಿ 36 ರನ್ ಬಾರಿಸಿದರು. ಜೆಸ್ ಜೊನಾಸ್ಸೆನ್ 4 ರನ್, ತಾನಿಯಾ ಭಾಟಿಯಾ 1 ರನ್ ಗಳಿಸಿದರೆ, ಕೊನೆಯಲ್ಲಿ ಅರುಂಧತಿ ರೆಡ್ಡಿ 17 ಎಸೆತಗಳಲ್ಲಿ 25 ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅವರ ವಿಕೆಟ್ ಬೀಳುತ್ತಿದ್ದಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲು ಖಚಿತವಾಯಿತು.
ಗುಜರಾತ್ ಜೈಂಟ್ಸ್ ಪರ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಕಿಮ್ ಗಾರ್ಥ್, ಆಶ್ಲೀಗ್ ಗಾರ್ಡ್ನರ್ ಹಾಗೂ ತನುಜಾ ಕನ್ವರ್ 2 ವಿಕೆಟ್ ಕಿತ್ತರು. ಉಳಿದಂತೆ ಸ್ನೇಹ ರಾಣಾ ಮತ್ತು ಹರ್ಲೀನ್ ಡಿಯೋಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್ ಬುಕ್ ಮಾಡೋದು ಹೇಗೆ..?
ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿಯಾ ಡಂಕ್ಲೆ ಮತ್ತು ಲಾರಾ ವೊಲ್ವಾರ್ಡ್ಟ್ ಇನ್ನಿಂಗ್ಸ್ ಆರಂಭಿಸಿದರು. ಒಂದು ಓವರ್‌ನಲ್ಲಿ 4 ರನ್‌ಗಳಾಗುವಷ್ಟರಲ್ಲಿ ಸೋಫಿಯಾ ಡಂಕ್ಲೆ ವಿಕೆಟ್ ಕಳೆದುಕೊಂಡಿತು. ನಂತರ ಹರ್ಲೀನ್ ಡಿಯೋಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. 33 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 31 ರನ್ ಗಳಿಸಿದ್ದ ಹರ್ಲೀನ್ ಡಿಯೋಲ್ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಗೂಡಿದ ಲಾರಾ ವೊಲ್ವಾರ್ಡ್ಟ್ ಹಾಗೂ ಆಶ್ಲೀ ಗಾರ್ಡ್ನರ್ ಬೆಂಕಿ ಬ್ಯಾಟಿಂಗ್ ಮಾಡಿದರು. ಲಾರಾ 45 ಎಸೆತಗಳಲ್ಲಿ 57 ರನ್ (6 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಸ್ಫೋಟಕ 51 ರನ್ ಬಾರಿಸಿ ಅಜೇಯರಾಗುಳಿದರು.
ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮರಿಜಾನ್ನೆ ಕಪ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.