ಮುಂಬೈ: ಶಫಾಲಿ ವರ್ಮ, ಮೆಗ್ ಲ್ಯಾನಿಂಗ್ ಸಿಕ್ಸರ್, ಬೌಂಡರಿಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮಹಿಳಾ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ವಿರುದ್ಧ 60 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಚೊಚ್ಚಲ ಡಬ್ಲ್ಯೂಪಿಎಲ್ (WPL) ಆವೃತ್ತಿಯ ಆರಂಭಿಕ ಪಂದ್ಯದಲ್ಲೇ ಆರ್‌ಸಿಬಿ ತಂಡ ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ.
ಸಿಕ್ಸರ್, ಬೌಂಡರಿಗಳ ಆಟದಲ್ಲಿ ಬರೋಬ್ಬರಿ 51 ಬೌಂಡರಿ, 10 ಸಿಕ್ಸರ್ ಗಳು ದಾಖಲಾದವು. ಡೆಲ್ಲಿ ಕ್ಯಾಪಿಟಲ್ಸ್ ಪರ 30 ಬೌಂಡರಿ 7 ಸಿಕ್ಸರ್‌ಗಳು ಸಿಡಿದರೆ, ಆರ್‌ಸಿಬಿ ಪರ 21 ಬೌಂಡರಿ 3 ಸಿಕ್ಸರ್ ದಾಖಲಾಯಿತು. ಮಹಿಳಾ ಮಣಿಗಳು ಪುರುಷರಿಗೇನೂ ಕಮ್ಮಿಯಿಲ್ಲ ಎನ್ನುವಂತೆ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸುತ್ತಾ ಆರ್ಭಟ ಮೆರೆದರು.
Advertisement
Advertisement
ಸೂಪರ್ ಸಂಡೆ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಬಾರಿಸಿತು. ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಗಳಿಸಲಷ್ಟೆ ಶಕ್ತವಾಗಿ, 60 ರನ್‌ಗಳಿಂದ ಸೋಲು ಕಂಡಿತು.
Advertisement
Advertisement
ನಾಯಕಿ ಮಂದಾನ 35 ರನ್, ಎಲ್ಲಿಸ್ ಪೆರ್ರಿ 31 ರನ್ ಹಾಗೂ ಹೀದರ್ ನೈಟ್ 34 ರನ್ ಗಳಿಸಿದರು. ನಂತರ ಡೆಲ್ಲಿ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ ತಂಡ ಒಂದೊಂದೇ ವಿಕೆಟ್ ಕಳೆದುಕೊಂಡಿತು. ಪರಿಣಾಮ 163 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲನುಭವಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ತಾರಾ ನಾರಿಸ್ 5 ವಿಕೆಟ್ ಪಡೆದು ಮಿಂಚಿದರೆ, ಆಲಿಸ್ ಕ್ಯಾಪ್ಸಿ 2 ವಿಕೆಟ್, ಶಿಖಾ ಪಾಂಡೆ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಮಹಿಳಾ ಮಣಿಗಳು ಆರ್‌ಸಿಬಿ ಬೌಲರ್ ಗಳನ್ನು ಬೆಂಡೆತ್ತಿದರು. ಮೊದಲ ವಿಕೆಟ್ ಜೊತೆಯಾಟಕ್ಕೆ 14.3 ಓವರ್ ಗಳಲ್ಲಿ 162 ರನ್‌ಗಳ ಬೃಹತ್ ಮೊತ್ತ ಪೇರಿಸಿದರು. ನಂತರ ಬಂದ ಮರಿಜಾನ್ನೆ ಕಾಪ್, ಜೆಮಿಮಾ ರೋಡ್ರಿಗಸ್ ಸಹ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದರು.
186.67 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಶಫಾಲಿ ವರ್ಮಾ 45 ಎಸೆತಗಳಲ್ಲಿ ಭರ್ಜರಿ 84 ರನ್ (10 ಬೌಂಡರಿ, 4 ಸಿಕ್ಸರ್) ಚಚ್ಚಿದರೆ, ನಾಯಕಿ ಮೆಗ್ ಲ್ಯಾನಿಂಗ್ 43 ಎಸೆತಗಳಲ್ಲಿ 14 ಬೌಂಡರಿ ಸಹಿತ 72 ರನ್ ಬಾರಿಸಿದರು.
ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಔಟಾದ ನಂತರ ಬಂದ ಮರಿಜಾನ್ನೆ ಕಾಪ್ ಮತ್ತು ಜೆಮಿಮಾ ರೊಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮರಿಜಾನ್ನೆ ಕಾಪ್ 17 ಎಸೆತಗಳಲ್ಲಿ ಸ್ಪೋಟಕ 39 ರನ್ (3 ಬೌಂಡರಿ 3 ಸಿಕ್ಸರ್) ಗಳಿಸಿದರೇ, ಜೆಮಿಮಾ 15 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 22 ರನ್ ಗಳಿಸಿ ಮಿಂಚಿದರು. ಆರ್‌ಸಿಬಿ ಪರವಾಗಿ ಹೀಥರ್ ನೈಟ್ ಮಾತ್ರ 2 ವಿಕೆಟ್ ಪಡೆದರು.