Bengaluru City
ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯರು!

ಮಂಗಳೂರು/ಮಂಡ್ಯ: ಮದುವೆ ಮಂಟಪಕ್ಕೆ ತೆರಳುವ ಮೊದಲೇ ವಧುಗಳು ಮತದಾನ ಮಾಡಿದ್ದರೆ, ಇತ್ತ ಮತದಾನ ಮಾಡಿದ ಬಳಿಕ ಇಬ್ಬರು ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ. ಪುತ್ತೂರಿನ ಉರ್ಲಾಂಡಿ ನಿವಾಸಿ ಮೀನಾಕ್ಷಿ ಹಾಗೂ ಚಿಕ್ಕಮರಳಿ ಗ್ರಾಮದ ಮಂಗಳ ನವೀನ್ ಮತ ಚಲಾಯಿಸಿ ನಂತರ ಹೆರಿಗೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.
ಮೀನಾಕ್ಷಿಯವರು ಪುತ್ತೂರು ನಗರ ಕೋರ್ಟ್ ಬೂತ್ ನಲ್ಲಿ ಮತ ಚಲಾಯಿಸಿದ್ದಾರೆ. ಮತದಾನ ಬಳಿಕ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸದೃಢ ಭಾರತಕ್ಕಾಗಿ ನವ-ವಧುಗಳು ಸರತಿ ಸಾಲಿನಲ್ಲಿಯೇ ನಿಂತು ಬೆಳಗ್ಗೆ ತನ್ನ ಹಕ್ಕು ಚಲಾಯಿಸಿದ್ದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ಶ್ರುತಿ ಶೆಟ್ಟಿ ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.
