ದಾನ್ ಫೌಂಡೇಶನ್ ಸಿಬ್ಬಂದಿಯಿಂದ ಮೋಸ ಆರೋಪ – ನಡುಬೀದಿಯಲ್ಲಿ ಮಹಿಳೆಯರ ಪ್ರತಾಪ

Public TV
2 Min Read
mnd womens akrosha collage copy

ಮಂಡ್ಯ: ಮಹಿಳೆಯರು ತಮ್ಮ ಅಭಿವೃದ್ಧಿಗೆ ಸಹಾಯವಾಗಲಿ ಎಂದು ತಮಿಳುನಾಡು ಮೂಲದ ಖಾಸಗಿ ಫೌಂಡೇಶನ್ ಒಂದರ ಸಹಯೋಗಲ್ಲಿ ಆರ್ಥಿಕ ಚಟುವಟಿಕೆ ನಡೆಸಿದ್ದರು. ಆದರೆ ಇದೀಗ ತಮಿಳು ಮೂಲದ ಈ ಫೌಂಡೇಶನ್ ನಮಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಅದರ ಸಿಬ್ಬಂದಿಯನ್ನು ಮಹಿಳೆಯರೇ ನಡುಬೀದಿಯಲ್ಲಿ ಎಳೆದಾಡಿದ್ದಾರೆ.

ಮಳವಳ್ಳಿ ಪಟ್ಟಣದ ಎನ್‍ಇಎಸ್ ಬಡಾವಣೆಯಲ್ಲಿ ತಮಿಳುನಾಡು ಮೂಲದ `ದಾನ್ ಫೌಂಡೇಶನ್’ ಎಂಬ ಸಂಸ್ಥೆ ಕಳೆದ 12 ವರ್ಷಗಳಿಂದಲೂ ಕೆಲಸ ನಿರ್ವಹಿಸಿಕೊಂಡು ಬರುತ್ತಿದೆ. ಈ ಫೌಂಡೇಶನ್ ನ ಅಡಿಯಲ್ಲಿ ಗಗನಚುಕ್ಕಿ ಮಹಿಳಾ ಕಳಂಜಿಯಂ ಒಕ್ಕೂಟ ಹಾಗೂ ವಿಶ್ವೇಶ್ವರಯ್ಯ ಕಳಂಜಿಯಂ ಒಕ್ಕೂಟ ಎಂಬ ಎರಡು ಮಹಿಳಾ ಒಕ್ಕೂಟಗಳು ಕೆಲಸ ನಿರ್ವಹಿಸುತ್ತಿವೆ. ಈ ಎರಡು ಒಕ್ಕೂಟಗಳಿಂದ 300 ಕ್ಕೂ ಹೆಚ್ಚು ಮಹಿಳಾ ಸಂಘಗಳು ಕೆಲಸ ನಿರ್ವಹಿಸುತ್ತಿದ್ದು ಹೆಚ್ಚಾಗಿ ಬಡ ಮಹಿಳೆಯರೇ ಇದರ ಸದಸ್ಯತ್ವವನ್ನ ಪಡೆದುಕೊಂಡಿದ್ದಾರೆ.

mnd womens akrosha 3

ಕಳೆದ 12 ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿರುವುದರಿಂದ ಸಂಘಗಳು ಸರಿಸುಮಾರು 2 ಕೋಟಿಯಷ್ಟು ಲಾಭದಲ್ಲಿ ನಡೆಯುತ್ತಿವೆ. ಇದರ ಜೊತೆಗೆ ಸಂಘಕ್ಕೆ ಎಂದು ಮಳವಳ್ಳಿಯ ಮೈಸೂರು ರಸ್ತೆಯಲ್ಲಿ ಸುಮಾರು 11 ಗುಂಟೆ ಜಮೀನನ್ನು ಖರೀದಿ ಮಾಡಲಾಗಿದೆ. ಆದರೆ ಆ ಜಮೀನನ್ನು ಫೌಂಡೇಶನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ನಡುವೆ ಸಂಘಗಳ ಲಾಭದ ಹಣವನ್ನು ಫೌಂಡೇಶನ್ ಸಿಬ್ಬಂದಿ ಮೂರು ಭಾಗ ಮಾಡಿದ್ದು, ತಲಾ 40 ಲಕ್ಷದಷ್ಟು ಹಣವನ್ನು ಹಂಚಿಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳಾ ಸಂಘಗಳ ಒಕ್ಕೂಟದ ಸದಸ್ಯರು, ಲಾಭದ ಹಣದಲ್ಲಿ ನಿಮಗ್ಯಾಕೆ ಪಾಲುಕೊಡಬೇಕೆಂದು ಹಠ ಹಿಡಿದು ಆಕ್ರೋಶ ಹೊರಹಾಕುತ್ತಿದ್ದಾರೆ.

mnd womens akrosha

ಇದೇ ವಿಚಾರವಾಗಿ ಮಾತನಾಡಲು ಸಂಘದ ಆವರಣದಲ್ಲಿ ಸಭೆ ಕರೆಯಲಾಗಿತ್ತು. ಆ ವೇಳೆ ಫೌಂಡೇಶನ್ ನ ಸಿಬ್ಬಂದಿ ಹಾಗೂ ಮಹಿಳಾ ಸಂಘಗಳ ಒಕ್ಕೂಟದ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ, ದಾನ್ ಫೌಂಡೇಶನ್ ನ ಸಿಂಬಂದಿಯನ್ನು ಎಳೆದಾಡಿರುವ ಮಹಿಳಾ ಸಂಘಗಳ ಸದಸ್ಯರು, ಹಲ್ಲೆ ಮಾಡಲು ಮುಂದಾಗಿದ್ದಾರೆ. ಘಟನೆ ಸಂಬಂಧ ದಾನ್ ಫೌಂಡೇಶನ್ ನ ಸಿಬ್ಬಂದಿ ಮಳವಳ್ಳಿ ಪಟ್ಟಣ ಠಾಣೆಗೆ ದೂರು ನೀಡಿದ್ದು ಗಲಾಟೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

mnd womens akrosha 1

ಘಟನೆ ಸಂಬಂಧ ಮಾತನಾಡಿರುವ ಫೌಂಡೇಶನ್ ಮೈಸೂರು ವಲಯ ಅಧಿಕಾರಿ ಗಜಾನನ ಹೆಗಡೆ, ಫೌಂಡೇಶನ್ ಕಾನೂನಾತ್ಮಕವಾಗಿಯೇ ನಡೆಯುತ್ತಿದೆ. ಅಲ್ಲದೆ ಲಾಭದ ಹಣವೂ ಸಹ ಮಹಿಳಾ ಸಂಘಗಳ ಹೆಸರಿನಲ್ಲೆ ಇದೆ. ಹೀಗಿದ್ದರೂ ಕೆಲವರು ಒಕ್ಕೂಟದ ಮೇಲೆ ಪ್ರಭುತ್ವ ಸಾಧಿಸಲು ಮಹಿಳೆಯರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

mnd womens akrosha 2

ದಾನ್ ಫೌಂಡೇಶನ್ ನ ಸಿಬ್ಬಂದಿ ಬೈಲಾವನ್ನು ಮೊದಲು ಕನ್ನಡದಲ್ಲಿ ಮಾಡಿಸಿದ್ದರೂ ಈಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಿದ್ದಾರೆ. ಈ ಮೂಲಕ ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಮಹಿಳಾ ಒಕ್ಕೂಟಗಳ ಸದಸ್ಯರು, ನಮ್ಮ ಒಕ್ಕೂಟದ ಲಾಭಾಂಶವನ್ನು ತಮಿಳಿನಾಡಿನ ಸಂಸ್ಥೆಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.

ಸದ್ಯ ಈಗ ದಾನ್ ಫೌಂಡೇಶನ್ ಗೆ ಎರಡೆರಡು ಬೀಗ ಹಾಕಲಾಗಿದ್ದು, ಪ್ರಕರಣ ಮಳವಳ್ಳಿ ಪಟ್ಟಣ ಠಾಣೆ ಮೆಟ್ಟಿಲೇರಿದೆ.

Share This Article
Leave a Comment

Leave a Reply

Your email address will not be published. Required fields are marked *