ಮಡಿಕೇರಿ: ನಮ್ಮ ಕನ್ನಡತಿಯರು ಅದೆಂಥ ಕಷ್ಟದಲ್ಲೂ ಕಣ್ಣೀರಿಡುತ್ತಾ ಕೂರುವವರಲ್ಲ ಅಂತ ಕೊಡಗಿನ ಹೆಣ್ಣು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಕೊಡವರ ತುಪಾಕಿಯಲ್ಲಿರುವಷ್ಟೇ ಶಕ್ತಿ ಕೊಡತಿಯರ ಕೈ ಬಳೆಯಲ್ಲೂ ಉಂಟು ಎಂದು ಸಾಬೀತುಪಡಿಸಿದ್ದಾರೆ. ವಿಧಿಯಾಟದ ವಿರುದ್ಧ ಕಾಲೂರಿ ಬಡಿದಾಡಿ ಗೆದ್ದ ಕಾಲೂರಿನಲ್ಲಿ ಸ್ತ್ರೀಯರಿವರು ಯಶೋಗಾಥೆ ಇಲ್ಲಿದೆ.
ಘಮ್ಮೆನ್ನುವ ಸಾಂಬಾರ್ ಪೌಡರ್, ರಸಂ ಪೌಡರ್, ಕೊಡಗಿನ ಫೇಮಸ್ ಪಂದಿಕರಿ ಮಸಾಲೆ ಒಂದೆಡೆಯಾದ್ರೆ, ಇನ್ನೊಂದು ಕಡೆ ಬಾಯಲ್ಲಿ ನೀರೂರಿಸುವ ಚಾಕ್ಲೇಟ್, ಕಡಲೆ, ಎಳ್ಳಿನ ಬರ್ಫಿ. ಇವೆಲ್ಲವನ್ನು ತಯಾರಿಸುತ್ತಿರುವುದು ಮಹಿಳೆಯರು. ಇವರೆಲ್ಲಾ ಲಾಭಕ್ಕಾಗಿ ಉದ್ಯಮ ಶುರು ಮಾಡಿ ಯಶಸ್ವಿಯಾಗಿರುವವರಲ್ಲ. ಬದಲಿಗೆ ಪ್ರವಾಹದ ವಿರುದ್ಧ ಈಜಿ ಜೀವನದ ವಿಧಿಯಾಟವನ್ನು ಗೆದ್ದಿರುವ ಕೆರೂರಿನ ವೀರ ವನಿತೆಯರು.
ಕೊಡಗು 2018ರಲ್ಲಿ ಎಂದೂ ಕಂಡು ಕೇಳರಿಯದಂತಹ ಭೂಕುಸಿತವನ್ನು ಕಂಡಿತ್ತು. ಆ ವೇಳೆ ಸಾವಿರಾರು ಕುಟುಂಬಗಳು ತಮ್ಮ ತೋಟ, ಹೊಲ, ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದವು. ಬಳಿಕ ಎಷ್ಟೋ ಕುಟುಂಬಗಳು ಊರನ್ನೇ ತೊರೆದು ಬಿಟ್ಟವು. ಆದರೆ ಮಡಿಕೇರಿ ತಾಲೂಕಿನ ಕಾಲೂರಿನ ಮಹಿಳೆಯರು ಮಾತ್ರ ಊರು ತೊರೆಯಲಿಲ್ಲ. ಬದಲಾಗಿ ಭೂಕುಸಿತ ಪ್ರವಾಹಕ್ಕೆ ಸೆಡ್ಡುಹೊಡೆದು ಸ್ವ-ಉದ್ಯೋಗ ಆರಂಭಿಸಿ ಇದೀಗ ಯಶಸ್ವಿ ಉದ್ಯಮಿಗಳಾಗುವತ್ತಾ ಹೆಜ್ಜೆ ಇಡುತ್ತಿದ್ದಾರೆ.
ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆಯರಿಗೆ ಬೆನ್ನೆಲುಬಾಗಿ ನಿಂತಿದ್ದು, ಭಾರತೀಯ ವಿದ್ಯಾಭವನ. ಆರಂಭದಲ್ಲಿ ಈ ಮಹಿಳೆಯರಿಗೆ ಕಾಲೂರಿನ ಸರ್ಕಾರಿ ಶಾಲೆಯಲ್ಲಿ ಮಸಾಲೆ ಪದಾರ್ಥಗಳ ತಯಾರಿಕೆ ಬಗ್ಗೆ ತರಬೇತಿ ನೀಡಲಾಗಿತ್ತು. ಆದ್ರೀಗ ದಾನಿಗಳ ನೆರವಿನಿಂದ ಒಂದೂವರೆಗೆ ಕೋಟಿ ರೂಪಾಯಿಯಲ್ಲಿ ದೊಡ್ಡ ಉದ್ಯಮವೇ ಆರಂಭವಾಗಿದೆ.
ಆರಂಭದಲ್ಲಿ ಮಸಾಲ ಪದಾರ್ಥಗಳನ್ನು ತಯಾರಿಸುತ್ತಿದ್ದ ಮಹಿಳೆಯರು ಈಗ ಚಾಕ್ಲೇಟ್, ಬರ್ಫಿಗಳನ್ನು ತಯಾರಿಸುತ್ತಿದ್ದಾರೆ. ಅವುಗಳನ್ನು ಆನ್‍ಲೈನ್ ಮೂಲಕವೂ ಮಾರಿ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಅಲ್ಲದೆ ನೆರೆ ಸಂತ್ರಸ್ತ ಮಹಿಳೆಯರಿಗೆ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಒಟ್ಟು 30 ಮಹಿಳೆಯರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಪ್ರವಾಹ, ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆಯರು ಅದೇ ಜಾಗದಲ್ಲಿ ಮತ್ತೆ ಗಟ್ಟಿಯಾಗಿ ನಿಂತು ಸ್ವಂತ ಉದ್ಯೋಗ ಆರಂಭಿಸಿ ಗಟ್ಟಿಗಿತ್ತಿಯರಾಗಿದ್ದಾರೆ.