ಬೆಂಗಳೂರು: ಈ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದು, ಹೆಣ್ಣು ಮಕ್ಕಳಿಲ್ಲ ಎಂಬ ಕೊರಗು ಇತ್ತು. ಹೀಗಾಗಿ ವಿಶ್ವ ಮಹಿಳಾ ದಿನಾಚರಣೆ ದಿನ ದಂಪತಿ ತಾಯಿ ಇಲ್ಲದ ತಬ್ಬಲಿಯನ್ನು ಮಗಳಾಗಿ ದತ್ತು ಪಡೆದಿದ್ದಾರೆ. ಜೊತೆಗೆ ಮಗಳಿಗೆ ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.
ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ದೂರವಾಗಿದ್ದ ಆನೆ ಮರಿಯೇ ಈ ಸರಸ್ವತಿ. ಕಳೆದ ಒಂದು ವಾರದ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಗಿಹಳ್ಳಿ ರೇಂಜ್‍ನಲ್ಲಿ ಒಂಟಿಯಾಗಿ ಕಾಣಿಸಿಕೊಂಡಿತ್ತು. ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಮರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಆರೈಕೆ ಮಾಡಿದ್ದರು. ಬಳಿಕ ಅರಣ್ಯ ಸಚಿವರ ನೇತೃತ್ವದಲ್ಲಿ ಮರಳಿ ತಾಯಿ ಮಡಿಲಿಗೆ ಸೇರಿಸಲು ಪ್ರಯತ್ನಿಸಲಾಗಿತ್ತು.
Advertisement
Advertisement
ಈ ವೇಳೆ ಸಚಿವರ ಜೊತೆ ಆಗಮಿಸಿದ್ದ ಪ್ರಾಣಿ ಪ್ರಿಯ ದಿನೇಶ್ ಪುಟಾಣಿ ಆನೆ ಮರಿಯನ್ನು ಕಂಡಾಗ ಒಂದು ಕ್ಷಣ ತಮ್ಮ ಸ್ವಂತ ಮಗುವಿನಂತೆ ಬಾಸವಾಗಿತ್ತು. ಹೀಗಾಗಿ ಜೀವಿತಾವಧಿ ಇರುವವರೆಗೂ ಮಗಳ ರೀತಿಯಲ್ಲಿ ಆನೆಯನ್ನು ಸಲಹಲು ತಿರ್ಮಾನಿಸಿದ್ದರು. ಈ ಕರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ದಿನೇಶ್, ನನ್ನ ಎರಡು ಗಂಡು ಮಕ್ಕಳ ಜೊತೆ ಮತ್ತೊಬ್ಬ ಮಗಳು ನಮ್ಮ ಕುಟುಂಬ ಸೇರಿಕೊಂಡಿದ್ದಾಳೆ. ಅದು ವಿಶ್ವ ಮಹಿಳಾ ದಿನಾಚರಣೆಯಂದು ನಮ್ಮ ಕುಟುಂಬಕ್ಕೆ ಬಂದಿರುವುದು ಸಂತಸ ತಂದಿದೆ. ನಾನು ಹಾಗೂ ನನ್ನ ಪತ್ನಿ ಮಗಳು ಸರಸ್ವತಿಯನ್ನು ಕಂಡು ಕಾಲ ಕಳೆದದ್ದು, ಹಾಲು ಕುಡಿಸಿದ್ದು ತುಂಬಾ ಸಂತೋಷವಾಗಿದೆ ಎಂದು ದಿನೇಶ್ ಅಭಿಪ್ರಾಯ ಹಂಚಿಕೊಂಡರು.
Advertisement
Advertisement
ತಾಯಿಯಿಂದ ಬೇರ್ಪಟ್ಟಿದ್ದ ಆನೆ ಮರಿಯನ್ನು ಮರಳಿ ತಾಯಿ ಜೊತೆ ಸೇರಿಸಲು ಕಾಡಿನಲ್ಲಿ ನಡೆದ ಅಪರೇಷನ್ ವೇಳೆ ದಿನೇಶ್ ಸಹ ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ತಾಯಿಗಾಗಿ ಆನೆ ಮರಿಯು ನಡೆಸಿದ ಪಡಿಪಾಟಲು, ಅದರ ಆರ್ಥನಾದ ದಿನೇಶ್ ಅವರ ಮನಸ್ಸಿಗೆ ನಾಟಿದೆ. ಹೀಗಾಗಿ ಅಂದೇ ಆನೆ ಮರಿಯನ್ನು ದತ್ತು ಪಡೆಯಲು ನಮ್ಮನ್ನು ಸಂಪರ್ಕಿಸಿದ್ದರು. ಇಂದು ವರ್ಷಕ್ಕೆ 1.75 ಲಕ್ಷ ರೂ. ಹಣ ಪಾವತಿಸಿ ದತ್ತು ಪಡೆದಿದ್ದು, ಅವರ ಜೀವಿತಾವಧಿ ಇರುವವರೆಗೂ ಪ್ರತಿ ವರ್ಷ ಹಣ ಪಾವತಿಸಿ ಆನೆ ಮರಿ ಆರೈಕೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದತ್ತು ಮಗಳಿಗೆ ಸರಸ್ವತಿ ಎಂದು ದಿನೇಶ್ ದಂಪತಿ ನಾಮಕರಣ ಮಾಡಿದ್ದಾರೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.