ಗುರುರಾಜ ಕುಲಕರ್ಣಿ (ನಾಡಗೌಡ) ಅವರ ‘ದಿ ಜಡ್ಜ್‌ಮೆಂಟ್’ ತಂಡವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (Women’s Day) ಬಹಳ ವಿಶೇಷ ರೀತಿಯಲ್ಲಿ ಆಚರಿಸಿತು. ಚಿತ್ರದ ಮಹಿಳಾ ನಟರು ತಮ್ಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು ಮತ್ತು ಪ್ರಪಂಚವು ಅದನ್ನು ಹೇಗೆ ತೊಡೆದು ಹಾಕಬೇಕೆಂದು ಅವರು ಬಯಸುತ್ತಾರೆ ಎಂದು ಮಾತನಾಡಿದರು. ಲಕ್ಷ್ಮೀ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್, ಧನ್ಯ ರಾಮ್‌ಕುಮಾರ್, ಸೀತಾ ಕೋಟೆ, ರೇಖಾ ಕೂಡ್ಲಿಗಿ ಮತ್ತು ರೂಪ ರಾಯಪ್ಪ ಅವರು ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು. ಇದರೊಂದಿಗೆ, ತಂಡವು ಮಹಿಳಾ ನಟಿಯರ ಮತ್ತು ತಂತ್ರಜ್ಞರನ್ನು ಒಳಗೊಂಡ ವಿಶೇಷ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿತು.
ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ದಿ ಜಡ್ಜ್ ಮೆಂಟ್’ (The Judgment) ಚಿತ್ರದ ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ (Climax Shooting) ಭಾಗದ ಚಿತ್ರೀಕರಣ ಇತ್ತೀಚೆಗೆ ಮೈಸೂರು ರಸ್ತೆಯಲ್ಲಿರುವ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ನಡೆಯಿತು. ರವಿಚಂದ್ರನ್, ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ರಂಗಾಯಣ ರಘು, ಬಾಲಾಜಿ ಮನೋಹರ್, ಸುಜಯ್ ಶಾಸ್ತ್ರಿ, ಜಗದೀಶ್ ಮಲ್ನಾಡ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ ಮತ್ತು ಅರವಿಂದ್ ಕುಪ್ಳೀಕರ್ ಮುಂತಾದ ನುರಿತ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಗುರುರಾಜ ಕುಲಕರ್ಣಿ(ನಾಡಗೌಡ) (Gururaj Kulkarni) ನಿರ್ದೇಶನದಲ್ಲಿ, ಸಿನಿಮಾಟೋಗ್ರಾಫರ್ ಪಿ. ಕೆ. ಹೆಚ್. ದಾಸ್ ಮೂರು ಕ್ಯಾಮೆರಾಗಳನ್ನು ಬಳಸಿಕೊಂಡು ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರಿಸಿಕೊಂಡರು. ವಿಶ್ವನಾಥ ಗುಪ್ತಾ, ರಾಮು ರಾಯಚೂರು ಮತ್ತು ರಾಜಶೇಖರ ಪಾಟೀಲ್ ಈ ಚಿತ್ರದ ನಿರ್ಮಾಪಕರು.
ದಿ ಜಡ್ಜ್ ಮೆಂಟ್ ಕಥೆ ಲೀಗಲ್ ಥ್ರಿಲ್ಲರ್ ಶೈಲಿಯದಾಗಿದ್ದು, ರಾಜ್ಯಾಂಗ ಮತ್ತು ನ್ಯಾಯಾಂಗದ ಸುತ್ತ ನಡೆಯುವ ಘಟನೆಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವದು ಗ್ಯಾರಂಟಿ ಎನ್ನುವುದು ನಿರ್ದೇಶಕ ಗುರುರಾಜ ಕುಲಕರ್ಣಿ ಮಾತು.