ಧಾರವಾಡ: ಮಹಿಳೆಯರಿಬ್ಬರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 30 ಲಕ್ಷ ರೂ. ಡ್ರಾ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ನಗರದ ಶೆಟ್ಟರ್ ಕಾಲೋನಿಯ ನಿವಾಸಿ ಎಂ.ಬಿ. ಅಳಗವಾಡಿ ಮತ್ತು ಸನ್ಮತಿ ನಗರದ ಸುಧಾ ಕೊಡಲಾಯ್ ಎಂಬವರ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ. ಎರಡೂ ಕೂಡ ಸೇವಿಂಗ್ಸ್ ಖಾತೆಗಳಾಗಿದ್ದು, ಎಂ.ಬಿ.ಅಳಗವಾಡಿ ಖಾತೆಯಿಂದ ಬರೋಬ್ಬರಿ 16 ಲಕ್ಷ ರೂ. ಮತ್ತು ಸುಧಾ ಅವರ ಖಾತೆಯಿಂದ 13 ಲಕ್ಷ ರೂ. ಹಣವನ್ನು ಡ್ರಾ ಮಾಡಲಾಗಿದೆ.
ನಗರದ ಕಾರ್ಪೋರೇಷನ್ ಸರ್ಕಲ್ ಬಳಿಯ ಎಸ್‍ಬಿಐ ಶಾಖೆಯಲ್ಲಿಯ ಎರಡೂ ಖಾತೆಗಳಿಂದ ಹ್ಯಾಕರ್ಸ್ ಗಳು ಹಂತ ಹಂತವಾಗಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಹಣ ಡ್ರಾ ಮಾಡಿದ್ದು, ಶನಿವಾರ ಪಾಸ್‍ಬುಕ್ ಎಂಟ್ರಿ ಮಾಡಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಧಾರವಾಡ ಶಹರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.