Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

Public TV
3 Min Read
Ind vs SL 1

– ಭಾರತದ ವನಿತೆಯರಿಗೆ ವಿರೋಚಿತ ಸೋಲು

ಡಂಬುಲ್ಲಾ: 2024ರ ಮಹಿಳಾ ಟಿ20 ಏಷ್ಯಾಕಪ್‌ (Women’s Asia Cup 2024) ಟೂರ್ನಿಯಲ್ಲಿ ಆಥಿತೇಯ ಶ್ರೀಲಂಕಾ ತಂಡ (SriLanka Womens Team) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ (Asian champions) ಆಗಿ ಹೊರಹೊಮ್ಮಿದ್ದು, 20 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದೆ. ಭಾರತ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಮಹಿಳಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 165 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಲಂಕಾ 18.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. 2012, 2016, 2018, 2022ರಲ್ಲಿ ಫೈನಲ್‌ ತಲುಪಿದ್ದ ಭಾರತ ಮೂರು ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಇನ್ನೂ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ 2022ರಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದ್ದ ಶ್ರೀಲಂಕಾ ಭಾರತದ ವಿರುದ್ಧವೇ 8 ವಿಕೆಟ್‌ಗಳ ಅಂತರದಿಂದ ಸೋತು ಚಾಂಪಿಯನ್‌ ಪಟ್ಟ ಕಳೆದುಕೊಂಡಿತ್ತು. ಇದೀಗ ಭಾರತದ ವಿರುದ್ಧವೇ ಗೆದ್ದು ಸೇಡು ತೀರಿಸಿಕೊಂಡಿದೆ.

Jemimah Rodrigues

ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?
13 ಓವರ್‌ಗಳ ವರೆಗೆ ಲಂಕಾ 2 ವಿಕೆಟ್‌ ಕಳೆದುಕೊಂಡಿದ್ದರೂ 99 ರನ್‌ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪೂಜಾ ವಸ್ತ್ರಕಾರ್‌ 14 ರನ್‌, 18ನೇ ಓವರ್‌ನಲ್ಲಿ ರಾಧಾ ಯಾದವ್‌ 17 ರನ್‌ ಬಿಟ್ಟುಕೊಟ್ಟರು. ಇದೂ ಲಂಕಾಗೆ ಬಹುದೊಡ್ಡ ಲಾಭವಾಯಿತು. ಅಲ್ಲದೇ ಕಳಪೆ ಫೀಲ್ಡಿಂಗ್‌, ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಭಾರತ ತಂಡ ಸೋಲು ಕಂಡಿತು.

166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಲಂಕಾ 7 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ನಂತರದಲ್ಲಿ ತಾಳ್ಮೆಯ ಆಟದೊಂದಿಗೆ ಗೆಲುವಿನ ಹಾದಿಯತ್ತ ಸಾಗಿತ್ತು. ನಾಯಕಿ ಚಾಮರಿ ಚಾಮರಿ ಅಥಾಪತ್ತು (Chamari Athapaththu) ಹಾಗೂ ಹರ್ಷಿತಾ ಸಮರವಿಕ್ರಮ (Harshitha Samarawickrama) ಅವರ ಆಕರ್ಷಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತದ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಿತು.

Smriti Mandhana

ಲಂಕಾ ಪರ ನಾಯಕಿ ಚಾಮರಿ ಅಥಾಪತ್ತು 43 ಎಸೆತಗಳಲ್ಲಿ 61 ರನ್‌ ಗಳಿಸಿದ್ರೆ, ಹರ್ಷಿತಾ 51 ಎಸೆತಗಳಲ್ಲಿ 69 ರನ್‌ ಬಾರಿಸಿದರು. ಇದರೊಂದಿಗೆ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ ಸ್ಫೋಟಕ 30 ರನ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಅಲ್ಲದೇ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ 19 ಎಸೆತಗಳಲ್ಲಿ 16 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌, ಉಮಾ ಚೆಟ್ರಿ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು ಇದು ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ನೀಡಿತ್ತು.

Chamari Athapaththu and Harshitha Samarawickrama

ಮಂಧಾನ ಬ್ಯಾಟಿಂಗ್‌ ಕಮಾಲ್‌:
ಒಂದೆಡೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಟೀಂ ಇಂಡಿಯಾ ಪರ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಬಾರಿಸುವ ಮೂಲಕ ಆಧಾರವಾದರು. 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸುವ ಮೂಲಕ ತಂಡದ ಮೊತ್ತ 160 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕೊನೆಯಲ್ಲಿ ರಿಚಾ ಘೋಷ್‌ 14 ಎಸೆತಗಳಲ್ಲಿ ಸ್ಫೋಟಕ 30 ರನ್‌, ಜೆಮಿಮಾ ರೊಡ್ರಿಗ್ಸ್‌ 16 ಎಸೆತಗಳಲ್ಲಿ 29 ರನ್‌ ಗಳ ಕೊಡುಗೆ ನೀಡಿದರು. ಪೂಜಾ ವಸ್ತ್ರಕಾರ್‌ 5 ರನ್‌, ರಾಧಾ ಯಾದವ್‌ 1 ರನ್‌, ಉಮಾ ಚೆಟ್ರಿ 9 ರನ್‌ ಹಾಗೂ ಕೌರ್‌ 11 ರನ್‌ ಗಳಿಸಿದರು.

Share This Article