ತುಮಕೂರು: ಲೈಂಗಿಕ ಕ್ರಿಯೆಗೆ ಒಲ್ಲೆ ಎಂದಿದ್ದಕ್ಕೆ ಕಿರಾತಕನೊಬ್ಬ ಮಹಿಳೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ.
ಸುಜಾತ(36) ಕೀಚಕನ ಕಾಟಕ್ಕೆ ಬಲಿಯಾದ ಮಹಿಳೆ. ಪಾವಗಡ ತಾಲೂಕಿನ ಮುರರಾಯನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಆರೋಪಿ ಗಿರೀಶ್ ಬಾಬು ವಿವಾಹಿತೆ ಸುಜಾತಾಳನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.
ಆರೋಪಿ ಗಿರೀಶ್ ಬಾಬು, ಸುಜಾತ ಮೇಲೆ ಹಲವು ದಿನಗಳಿಂದ ಕಣ್ಣಿಟ್ಟಿದ್ದನು. ಸುಜಾತಳ ಪತಿ ಇಲ್ಲದಿರುವುದನ್ನು ನೋಡಿದ ಗಿರೀಶ್ ಆಕೆಯ ಮನೆಗೆ ನುಗ್ಗಿದ್ದಾನೆ. ಈ ವೇಳೆ ಗಿರೀಶ್, ಸುಜಾತಳನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಸುಜಾತಾ ಪ್ರತಿರೋಧ ಒಡ್ಡಿದಾಗ ಗಿರೀಶ್ ಆಕೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ತಕ್ಷಣ ಸುಜಾತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆಯ ದೇಹ ತೀವ್ರವಾಗಿ ಸುಟ್ಟಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ.
ಈ ಬಗ್ಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿ ಗಿರೀಶ್ ಬಾಬುನನ್ನು ಬಂಧಿಸಿದ್ದಾರೆ.