ಕೋಲ್ಕತ್ತಾ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ ‘ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಈಗ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿದೆ. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.
ರಿಯಾಲಿಟಿ ಶೋಗಾಗಿ ಮೊಂಡಲ್ ಪಾರ್ಲರ್ ನಲ್ಲಿ ತಯಾರಾಗುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಈ ಕಾರ್ಯಕ್ರಮಕ್ಕಾಗಿ ಮೊಂಡಲ್ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿದ್ದಾರೆ. ಮೊಂಡಲ್ ಅವರು ಹಾಡಿದ ವಿಡಿಯೋ ಇದುವರೆಗೂ 39 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, 59 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 5 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.
ಮುಂಬೈ ಅಲ್ಲದೆ ಕೇರಳ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂತೆ ಮೊಂಡಲ್ ಅವರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ತನ್ನದೆ ಸ್ವಂತ ಮ್ಯೂಸಿಕ್ ಆಲ್ಬಂ ಶುರು ಮಾಡುವಂತೆ ಮೊಂಡಲ್ ಅವರಿಗೆ ಅವಕಾಶ ಬರುತ್ತಿದೆ.