ಬಾಗಲಕೋಟೆ: ಅದೊಂದು ಸಾಧಾರಣ ಬಡತನದ ಕುಟುಂಬ. ಆ ವೃದ್ಧೆಗೆ ಮಕ್ಕಳಿರಲಿಲ್ಲ. ಇದ್ದೊಬ್ಬ ಗಂಡನೂ ಅಂಗವಿಕಲನಾಗಿದ್ರು. ಗಂಡ ಇದ್ದಾಗ ಆಕೆಯನ್ನ ಹೇಗಾದರೂ ಮಾಡಿ ಸಾಕುತ್ತಿದ್ದರು. ಆದರೆ ಅದ್ಯಾಕೋ ಏನೋ ಗೊತ್ತಿಲ್ಲ ಏಕಾಏಕಿ ಗಂಡ ಕಾಣೆಯಾಗಿದ್ದಾರೆ. ಇದ್ದೊಂದು ಮನೆಯೂ ಮಳೆಗೆ ಬಿದ್ದೋಗಿದೆ. ಇದರಿಂದ ಅತಂತ್ರರಾದ ವೃದ್ಧ ಮಹಿಳೆ ಬರೋಬ್ಬರಿ 17 ವರ್ಷದಿಂದ ಗಂಡನಿಗಾಗಿ ಕಾದು ಕುಳಿತಿದ್ದಾರೆ.
ಗಂಡನ ಫೋಟೋ ಕೈಯಲ್ಲಿ ಹಿಡಿದು ಕಣ್ಣೀರಿಡುತ್ತಾ 17 ವರ್ಷದಿಂದ ಆತನ ಬರುವಿಕೆಗಾಗಿ ಕಾದು ಕುಳಿತಿರೋ ಮಹಿಳೆಯ ಹೆಸರು ರತ್ನವ್ವ ಕೇಸನೂರ. ಮೂಲತ: ಬಾಗಲಕೋಟೆ ಜಿಲ್ಲೆಯ ಕಡ್ಲಿಮಟ್ಟಿ ಗ್ರಾಮದ ನಿವಾಸಿ. ಇವರ ಪತಿ ಹನುಮಂತ ಕೇಸನೂರ. ಪತಿ ಅಂಗವಿಕಲನಾಗಿದರೂ ಆಕೆಯನ್ನ ಚೆನ್ನಾಗಿ ನೋಡಿಕೊಂಡಿದ್ದರು. ಆದರೆ ಹೊಲವೊಂದರ ವಿಚಾರ ಎಂದು ಬಂದಾಗ ಏಕಾಏಕಿ ಹನಮಂತ ಕಾಣೆಯಾಗಿಬಿಟ್ಟಿದ್ದರು.
Advertisement
Advertisement
ಇದರಿಂದ ನಿರಂತರ 5 ವರ್ಷ ಗಂಡನನ್ನ ಹುಡುಕಿದ ರತ್ನವ್ವ ಕೊನೆಗೆ ಪೊಲೀಸ್ ಠಾಣೆಗೆ ಕಾಣೆಯಾಗಿರೋ ಬಗ್ಗೆ ದೂರು ನೀಡಿದರು. ಇವುಗಳ ಮಧ್ಯೆ ಊರೂರು ಸುತ್ತಿ ಹೋದ ಕಡೆಗೆಲ್ಲಾ ಬಸ್ ನಿಲ್ದಾಣ, ಮನೆ, ಮಠ, ಮಂದಿರ, ಮದುವೆ ಮುಂಜಿ ಹೀಗೆ ಎಲ್ಲೆಂದರಲ್ಲಿ ಹುಡುಕಿ ಹುಡುಕಿ ಸುಸ್ತಾದರು. ಇವುಗಳ ಮಧ್ಯೆ ಇದ್ದೊಂದು ಮನೆಯೂ ಮಳೆಗೆ ಬಿದ್ದೋಯ್ತು. ಇದರಿಂದ ಅತಂತ್ರರಾದ ರತ್ನವ್ವ 17 ವರ್ಷ ಗತಿಸಿದರೂ ಗಂಡನ ನಿರೀಕ್ಷೆಯಲ್ಲಿದ್ದಾರೆ.
Advertisement
Advertisement
ಇನ್ನು ಇತ್ತ ಗಂಡ ಹನುಮಂತ ಜೀವಂತವಿದ್ದಾಗ ಖಾಸಗಿ ಬ್ಯಾಂಕ್ ನಲ್ಲಿ ರತ್ನವ್ವ ಮತ್ತು ತನ್ನ ಹೆಸರಿನಲ್ಲಿ ಹಣವನ್ನ ಇಟ್ಟಿದ್ದರಂತೆ. ಹಣ ಇಟ್ಟ ಬಗ್ಗೆ ದಾಖಲೆಗಳಿದ್ದು, ಆದರೆ ಮಳೆ ಬಂದು ಮನೆ ಬಿದ್ದು ಹೋದಾಗ ದಾಖಲೆಗಳು ಸಹ ಕಳೆದು ಹೋಗಿವೆ. ಇದರಿಂದ ಇತ್ತ ಬ್ಯಾಂಕ್ ನಲ್ಲಿ ಹಣ ಕೇಳೋಕೆ ಹೋದರೂ ಕ್ಯಾರೆ ಅನ್ನುತ್ತಿಲ್ಲ ಮತ್ತು ಡಾಕ್ಯೂಮೆಂಟ್ ಕೇಳುತ್ತಾರೆ. ಇದರಿಂದ ಇತ್ತ ಗಂಡನೂ ಇಲ್ಲ ಅತ್ತ ಹಣವೂ ಇಲ್ಲದೆ ಮಹಿಳೆ ಅತಂತ್ರವಾಗಿದ್ದು, ಕಣ್ಣೀರಿಡುತ್ತಿದ್ದಾರೆ.
ಒಟ್ಟಿನಲ್ಲಿ ಇವರು ಕಳೆದ 17 ವರ್ಷಗಳಿಂದ ಗಂಡನಿಗಾಗಿ ಜಾತಕಪಕ್ಷಿಯಂತೆ ಕಾದು ಕುಳಿತಿದ್ದು, ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.