CricketLatestSports

‘ವಾವ್ ಸಹೋದರ ವಾವ್’- ಶೆಫಾಲಿ ವರ್ಮಾ ರಾಕ್‍ಸ್ಟಾರ್ ಎಂದ ಸೆಹ್ವಾಗ್

Advertisements

– ಶೆಫಾಲಿ ಸೆಹ್ವಾಗ್‍ರನ್ನು ನೆನಪಿಸುತ್ತಾಳೆ: ಡಯಾನಾ ಎಡುಲ್ಜಿ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡವು ಹ್ಯಾಟ್ರಿಕ್ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಈ ಪ್ರಯಾಣದಲ್ಲಿ ಹರಿಯಾಣದ 16 ವರ್ಷದ ಶೆಫಾಲಿ ವರ್ಮಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೆಫಾಲಿ ವರ್ಮಾ ಬಗ್ಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಹಾಗೂ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್, ಶೆಫಾಲಿ ಅವರನ್ನು ರಾಕ್‍ಸ್ಟಾರ್ ಎಂದು ಬಣ್ಣಿಸಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡಕ್ಕೆ ಅಭಿನಂದನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 34 ಎಸೆತಗಳಲ್ಲಿ 46 ರನ್- ಟಿ20 ವಿಶ್ವಕಪ್‍ನಲ್ಲಿ ವಿಶ್ವದಾಖಲೆ ಬರೆದ 16ರ ಶೆಫಾಲಿ

ಶೆಫಾಲಿ ಅದ್ಭುತಗಳನ್ನು ಮಾಡಬಹುದು:
ಭಾರತದ ಶೆಫಾಲಿ ವರ್ಮಾ ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿ 27ರ ಗುರುವಾರ ನಡೆದ ಪಂದ್ಯದಲ್ಲಿ 34 ಎಸೆತಗಳಲ್ಲಿ 46 ರನ್ ಗಳಿಸಿದರು. ಈ ಪಂದ್ಯದಲ್ಲಿ ಉಳಿದ ಯಾವುದೇ ಆಟಗಾರರು ಉತ್ತಮ ಬ್ಯಾಟಿಂಗ್ ತೋರಲಿಲ್ಲ. ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಶೆಫಾಲಿ ವರ್ಮಾ ಇದುವರೆಗೆ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಪಂದ್ಯಶ್ರೇಷ್ಠಕ್ಕೆ ಭಾಜನರಾಗಿದ್ದಾರೆ.

ಶೆಫಾಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‍ನ ಮಾಜಿ ನಾಯಕ ನಾಸಿರ್ ಹುಸೇನ್, ಶೆಫಾಲಿ ತುಂಬಾ ಗಂಭೀರವಾಗಿ ಆಡುತ್ತಾರೆ. ಜೊತೆಗೆ ಅವರು ಅದ್ಭುತಗಳನ್ನು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೊನೆಯ ಓವರಿನಲ್ಲಿ 3 ರನ್‍ಗಳ ರೋಚಕ ಜಯ- ಹ್ಯಾಟ್ರಿಕ್ ಗೆಲುವು, ಸೆಮಿಗೆ ಟೀಂ ಇಂಡಿಯಾ

ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಮಾತನಾಡಿ, ಮಹಿಳಾ ಕ್ರಿಕೆಟ್ ವೀಕ್ಷಿಸಲು ಜನರನ್ನು ಕ್ರೀಡಾಂಗಣಕ್ಕೆ ಕರೆತರುವ ಶಕ್ತಿ ಶೆಫಾಲಿಗೆ ಇದೆ. ಅವರನ್ನು ಬೇರೆಯವರಿಗೆ ಹೋಲಿಸಲು ನಾನು ಬಯಸುವುದಿಲ್ಲ. ಆದರೆ ಶೆಫಾಲಿ ಖಂಡಿತವಾಗಿಯೂ ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸುತ್ತಾಳೆ ಎಂದು ನಾನು ಹೇಳುತ್ತೇನೆ. ಆಕ್ರಮಣಕಾರಿ ಬ್ಯಾಟಿಂಗ್ ಶೆಫಾಲಿ ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ.

ರಾಕ್‍ಸ್ಟಾರ್ ಶಫಾಲಿ:
ಮಹಿಳಾ ವಿಶ್ವಕಪ್‍ನಲ್ಲಿ ಭಾರತ ತಂಡದ ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಅವರ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಶೆಫಾಲಿ ವರ್ಮಾ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ವಿರೇಂದ್ರ ಸೆಹ್ವಾಗ್ ಕೂಡ ಶೆಫಾಲಿ ವರ್ಮಾ ಅಭಿಮಾನಿ. ಗುರುವಾರ ನ್ಯೂಜಿಲೆಂಡ್ ವಿರುದ್ಧದ ಶೆಫಾಲಿ ಅವರ ಇನ್ನಿಂಗ್ಸ್ ವೀಕ್ಷಿಸಿದ ನಂತರ ವೀರು ಟ್ವೀಟ್ ಮಾಡಿದ್ದಾರೆ. ‘ವಾವ್, ಸಹೋದರ. ವಾವ್’ ಶೆಫಾಲಿ ವರ್ಮಾ ರಾಕ್‍ಸ್ಟಾರ್ ಎಂದು ಹೊಗಳಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಶೆಫಾಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹುಡುಗರೊಂದಿಗೆ ಅಭ್ಯಾಸ:
16 ವರ್ಷದ ಶೆಫಾಲಿ ಎರಡು ವರ್ಷಗಳ ಹಿಂದೆ ರೋಹ್ಟಕ್‍ನ ಕ್ರಿಕೆಟ್ ಅಕಾಡೆಮಿಯಲ್ಲಿ ಹುಡುಗರೊಂದಿಗೆ ಅಭ್ಯಾಸ ಮಾಡುತ್ತಿದ್ದಳು. 130 ಕಿ.ಮೀ ವೇಗದಲ್ಲಿ ಬರುವ ಹರಿಯಾಣ ವೇಗದ ಬೌಲರ್ ಆಶಿಶ್ ಹೂಡಾ ಅವರ ಬಾಲ್‍ಗಳನ್ನು ಸುಲಭವಾಗಿ ನೆಟ್‍ನಲ್ಲಿ ಶೆಫಾಲಿ ಆಡಬಹುದೆಂದು ತರಬೇತುದಾರ ಅಶ್ವಿನಿ ಕುಮಾರ್ ಹೇಳಿದ್ದಾರೆ. ಟಿ20 ವಿಶ್ವಕಪ್‍ನಲ್ಲಿ ಶೆಫಾಲಿ ಉತ್ತಮ ಆಟವನ್ನು ತೋರಿಸುತ್ತಾರೆ ಎಂದು ನನಗೆ ಬಹಳ ಖಚಿತವಾಗಿತ್ತು ಎಂದು ಅಶ್ವಿನಿ ಕುಮಾರ್ ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಶೆಫಾಲಿ ವರ್ಮಾ 34 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದರೊಂದಿಗೆ ಶೆಫಾಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2020ರಲ್ಲಿ ಉತ್ತಮ ಬ್ಯಾಟಿಂಗ್ ಶೆಫಾಲಿ ವರ್ಮಾ ತೋರುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಿಂದ ಶೆಫಾಲಿ ವರ್ಮಾ 172.72 ರ ಸರಾಸರಿಯಲ್ಲಿ ಒಟ್ಟು 114 ರನ್ ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಪಡೆದ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.

16 ವರ್ಷದ ಶೆಫಾಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 29 ರನ್ (19 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 39 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ತೋರಿದ್ದ ಶೆಫಾಲಿ 46 ರನ್ (34 ಎಸೆತ, 4 ಬೌಂಡರಿ, 3 ಸಿಕ್ಸರ್) ಚಚ್ಚಿದ್ದರು.

Leave a Reply

Your email address will not be published.

Back to top button