ಕೋಲಾರ: ಪ್ರೀತಿಸಿ ಮದುವೆಯಾಗಿ ಪುಟ್ಟ ಸಂಸಾರವನ್ನು ಕಟ್ಟಿಕೊಂಡು ಕಂದನೊಂದಿಗೆ ಸಂತಸದಲ್ಲಿರಬೇಕಾದ ತಾಯಿಯನ್ನ ಖಾಸಗಿ ಆಸ್ಪತ್ರೆಯೊಂದು ಕೋಮಾ ಸ್ಥಿತಿಗೆ ತಂದೊಡ್ಡಿದೆ. 2 ವರ್ಷದಿಂದ ತಾನು ಮಾಡದ ತಪ್ಪಿಗೆ ಜೀವಂತ ಶವವಾಗಿ ಸಾವು ಬದುಕಿನ ನಡುವೆ ನ್ಯಾಯಾಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ದಿವ್ಯಾ ಹಾಗೂ ರಘುಪತಿ ದಂಪತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. 2017ರ ಮಾರ್ಚ್ 31ರಂದು ಮಾಲೂರು ಪಟ್ಟಣದ ಸೇಂಟ್ ಮೇರಿಸ್ ಆಸ್ಪತ್ರೆಗೆ ದಿವ್ಯಾರನ್ನು ಹೆರಿಗೆಗೆಂದು ದಾಖಲಿಸಲಾಗಿತ್ತು. ಆಸ್ಪತ್ರೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿ ಹೆರಿಗೆ ಮಾಡಿಸಿದ್ದಾರೆ. ದಿವ್ಯಾಗೆ ಗಂಡು ಮಗುವಾಗಿದೆ. ಆದರೆ ಅಂದು ಕೋಮಾ ಸ್ಥಿತಿಗೆ ತಲುಪಿರುವ ದಿವ್ಯಾ ಇಂದಿಗೂ ಜೀವಂತ ಶವವಾಗಿದ್ದಾರೆ. ಆಸ್ಪತ್ರೆ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಸೇಂಟ್ ಮೇರೀಸ್ ಆಸ್ಪತ್ರೆ ವಿರುದ್ಧ ದಿವ್ಯಾ ಪತಿ ರಘುಪತಿ ಹಾಗೂ ತಂದೆ ಪಾರ್ಥ ಸಾರಥಿ ನ್ಯಾಯಕ್ಕಾಗಿ ಈಗ ಹೋರಾಟ ನಡೆಸುತ್ತಿದ್ದಾರೆ.
Advertisement
Advertisement
ನ್ಯಾಯಕ್ಕಾಗಿ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ಪರಿಷತ್ ಮೊರೆ ಹೋದರೆ, ಮೊದಲು ನ್ಯಾಯ ಕೊಡಿಸುವುದಾಗಿ ಹೇಳಿದ ಅಧಿಕಾರಿಗಳು, ಸೇಂಟ್ ಮೇರಿಸ್ ಆಸ್ಪತ್ರೆಯವರೊಂದಿಗೆ ಶಾಮಿಲಾಗಿ ಪೋಸ್ಟ್ ಮೂಲಕ ಸಂತ್ರಸ್ತೆ ದಿವ್ಯಾ ಸತ್ತಿದ್ದಾಳೆಂದು ಸರ್ಟಿಫಿಕೇಟ್ ಕಳುಹಿಸಿದ್ದಾರೆ ಎಂದು ದಿವ್ಯಾ ಪತಿ ರಘುಪತಿ ಆರೋಪಿಸಿದ್ದಾರೆ.
Advertisement
ಖಾಸಗಿ ಆಸ್ಪತ್ರೆಯ ಲಾಬಿಗೆ ಮಣಿದು ಬದುಕಿರುವ ತಾಯಿಯನ್ನು ಸತ್ತಿದ್ದಾಳೆಂದು ನಿರೂಪಿಸಿದ ಕರ್ನಾಟಕ ವೈದ್ಯಕೀಯ ಪರಿಷತ್ ಅಧಿಕಾರಿಗಳ ಲಂಚದಾಹಕ್ಕೆ ತಾಜಾ ಉದಾಹರಣೆ ಇದಾಗಿದೆ. ಅಷ್ಟೇ ಅಲ್ಲದೇ ಆಸ್ಪತ್ರೆ ಹಾಗೂ ಸಂತ್ರಸ್ತೆ ಬಳಿ ಬಂದು ವಿಚಾರಣೆ ನಡೆಸದೆ ಏಕಾಏಕಿ ಡೆತ್ ಸರ್ಟಿಫಿಕೇಟ್ ಕೊಟ್ಟಿರುವುದು ಕೆಎಂಸಿ ಖಾಸಗಿ ಆಸ್ಪತ್ರೆ ಜೊತೆ ಶಾಮಿಲಾಗಿದ್ದಕ್ಕೆ ಸಾಕ್ಷಿ ಎಂದು ದಿವ್ಯಾ ಸಂಬಂಧಿಕರು ಆರೋಪ ಮಾಡಿದ್ದಾರೆ.
Advertisement
ಆಸ್ತಿಯನ್ನು ಮಾರಾಟ ಮಾಡಿ ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದುವರೆಗೂ 25 ಲಕ್ಷ ರೂ. ಖರ್ಚು ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿದಿಗಳು ಇಂತಹ ಅನ್ಯಾಯದ ವಿರುದ್ದ ಧ್ವನಿ ಎತ್ತಿಲ್ಲ. ಏನಾದರೂ ಮಾಡಿ ಪತ್ನಿ ಹಾಗೂ ಮಗಳನ್ನ ಉಳಿಸಿಕೊಳ್ಳಬೇಕು ಎನ್ನುತ್ತಿರುವ ಪತಿ ಹಾಗೂ ನಮಗೆ ಮಗಳ ಸ್ಥಿತಿಗೆ ಹಣ ಹೊಂದಿಸುವುದು ಕಷ್ಟೆವೆನಿಸಿಲ್ಲ. ಆಧರೆ ದಿವ್ಯಾ ಡೆತ್ ಸರ್ಟಿಫಿಕೇಟ್ ನೀಡಿರುವುದು ಸಾಕಷ್ಟು ನೋವು ತಂದಿದೆ. ಬದುಕಿರುವ ಮಗಳನ್ನು ಸಾಯಿಸಿರುವ ಕರ್ನಾಟಕ ವೈದ್ಯಕೀಯ ಪರಿಷತ್ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ದಿವ್ಯಾಳ ತಂದೆ ಪಾರ್ಥಸಾರಥಿ ಹೇಳಿದ್ದಾರೆ.
ಸೇಂಟ್ ಮೇರೀಸ್ ಆಸ್ಪತ್ರೆ ಹಾಗೂ ಡೆತ್ ಸರ್ಟಿಫಿಕೇಟ್ ಕೊಟ್ಟ ಕೆಎಂಸಿ ವಿರುದ್ಧ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ನಮಗಾದ ಅನ್ಯಾಯ ಮತ್ಯಾರಿಗೂ ಆಗಬಾರದೆಂಬುದು ದಿವ್ಯಾಳ ಪತಿ, ಪೋಷಕರು ಈಗ ಕಣ್ಣೀರು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv