ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯ ಕಾರಣ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಇದನ್ನು ಮಹಿಳಾ ಅಧಿಕಾರಿಯೊಬ್ಬರು ಸ್ವತಃ ತಾವೇ ಕತ್ತರಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಕೊಂತನಮನೆ ಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಅಧಿಕಾರಿ ಕವಿತಾ ಅವರು ಅನಾರೋಗ್ಯ ಪೀಡಿತ ತಮ್ಮ ತಂದೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಅವರು ಹೋಗುವ ರಸ್ತೆ ಮಧ್ಯೆ ಭಾರೀ ಗಾತ್ರದ ಮರವೊಂದು ಬಿದ್ದಿತ್ತು. ಅದನ್ನು ಕಾರ್ಮಿಕರು ಕತ್ತರಿಸುತ್ತಿರುವುದು ಕಂಡಿದೆ.
Advertisement
ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕವಿತಾ ಅವರು ಕೂಡಲೇ ಕಾರಿನಿಂದ ಇಳಿದು ಗರಗಸವನ್ನು ಹಿಡಿದು ತಾವೂ ಕೂಡ ಕೆಲಸ ಮಾಡಿ ಮರವನ್ನು ಪಕ್ಕಕ್ಕೆ ಹಾಕಿದ್ದಾರೆ. ಬಳಿಕ ಕಾರಿನಲ್ಲಿ ಹೊರಟಿದ್ದಾರೆ. ಆದರೆ ಈ ಕುರಿತು ಕವಿತಾ ಅವರು ಈ ಸಮಸ್ಯೆಗಳನ್ನು ಬೇಗ ಪರಿಹರಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Advertisement
ಕವಿತಾ ಅರಕಲಗೂಡು ಪಟ್ಟಣ ಪಂಚಾಯಿತಿಯ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಜನಪರ ಕಾಳಜಿಯಿಂದಾಗಿ ಚಿರಪರಿಚಿತ ಅಧಿಕಾರಿಯಾಗಿದ್ದಾರೆ.
Advertisement