ಹುಬ್ಬಳ್ಳಿ: ಕೆಲಸಕ್ಕೆ ತೆರಳುತ್ತಿದ್ದ ಮಹಿಳಾ ಪತ್ರಕರ್ತೆಗೆ ರಸ್ತೆಯಲ್ಲಿ ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ ರೋಡ್ ರೋಮಿಯೋಗೆ ಸ್ಥಳೀಯರು ಸೇರಿದಂತೆ ಮಹಿಳಾ ಪತ್ರಕರ್ತೆ ಬಿಸಿ, ಬಿಸಿ ಕಜ್ಜಾಯ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ: ತಾತನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕಳು – ತಾತನಿಗೆ ನೆರವಾದ ಜ್ಯೋತಿಷಿ ಕಮಲಾಕರ್ ಭಟ್
ಹುಬ್ಬಳ್ಳಿಯ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಮಹಿಳಾ ಪತ್ರಕರ್ತೆ ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ತೆರಳುತ್ತಿರುತ್ತಾರೆ. ಈ ವೇಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಜನನಿಬಿಡ ಪ್ರದೇಶದ ಬಳಿ ರೋಡ್ ರೋಮಿಯೋ ಮಹಿಳಾ ಪತ್ರಕರ್ತೆಯನ್ನ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಪೊಲೀಸರು ಹಾಗೂ ಕಚೇರಿಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ ಪತ್ರಕರ್ತೆ ಸ್ಥಳೀಯರ ಸಹಾಯದಿಂದ ರೋಡ್ ರೋಮಿಯೋನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ರೋಡ್ ರೋಮಿಯೋಗೆ ಮಹಿಳಾ ಪತ್ರಕರ್ತೆ ಕರಾಟೆ ಪಂಚ್ ನೀಡಿರುವುದಾಗಿ ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಲಿರುವ ಬೆಂಗಳೂರು ಮೆಟ್ರೋ
20 ವರ್ಷದ ಹಿಂದೆ ಕಲಿತ ಕರಾಟೆ ನಿನ್ನೆ ಕೆಲಸಕ್ಕೆ ಬಂತು: ಅದು ನಿರ್ಜನ ಪ್ರದೇಶವಲ್ಲ. ಸದಾ ವಾಹನ, ಜನರಿಂದ ಗಿಜುಗುಡುವ ಕಿಮ್ಸ್ ಸರ್ಕಲ್ ಏರಿಯಾ. ಮಧ್ಯರಾತ್ರಿಯೂ ಅಲ್ಲ. ಸಂಜೆ ನಸುಗತ್ತಲ 7 ಗಂಟೆ ಸಮಯ. ಅಷ್ಟಕ್ಕೂ ನಾನು ಕಚೇರಿಗೆ ಹೊರಟ ಸಮಯವದು. ಮನೆಯಿಂದ ಹೊರಟು, ರೋಡ್ ಕ್ರಾಸ್ ಮಾಡಿ ಹೆಜ್ಜೆ ಹಾಕಿದರೆ ಒಟ್ಟು 10 ನಿಮಿಷದ ಹಾದಿ. ಈ ಹಾದಿಯ ಅರ್ಧದಲ್ಲಿ ಈ ಯುವಕ ನನ್ನ ಫಾಲೋ ಮಾಡಲು ಶುರುಮಾಡಿದ. ಫೋನಿನಲ್ಲಿ ಮಾತಾಡೋ ನೆಪದಲ್ಲಿ ಅಶ್ಲೀಲ ಮಾತು, ಅಸಭ್ಯ ವರ್ತನೆ ನನಗೆ ಸಿಟ್ಟು ನೇತ್ತಿಗೇರಿಸಿತ್ತು. ಕಿಮ್ಸ್ ಸರ್ಕಲ್ ನಲ್ಲಿ ನಿಂತರೆ ಆತನು ನಿಂತ. ಫೋಲಿಸರಿಗೆ ಇನ್ಫಾರ್ಮ್ ಮಾಡಿದರೂ ನನ್ನ ಪಕ್ಕ ಬಿಟ್ಟು ಕದಲಲಿಲ್ಲ. ನಾನು ನನ್ನ ಆಫೀಸ್‌ಗೆ ಫೋನ್ ಮಾಡಿ ವಿಷಯ ತಿಳಿಸಿದರೂ ಕದಲಲಿಲ್ಲ. ನಂತರ ನನ್ನ ಸಹೋದ್ಯೋಗಿಗಳು ಬರುತ್ತಲೇ ಕಾಲ್ಕಿತ್ತ. ಅವನನ್ನು ಹಿಡಿದು ಒಂದಷ್ಟು ಬಿಸಿ ಬಿಸಿ ಕಜ್ಜಾಯ ಕೊಟ್ಟೆ. 20 ವರ್ಷಗಳ ಹಿಂದೆ ಕಲಿತಿದ್ದ ಕರಾಟೆ ಪ್ರಯೋಗ ಮಾಡಿರಲಿಲ್ಲ. ನಿನ್ನೆ ಮಾತ್ರ ಆತನ ಮೇಲೆ ಪಂಚ್, ಕಿಕ್ ಸರ್ಯಾಗ್ ಕೊಟ್ಟೆ. ಅಲ್ಲಿದ್ದವರೂ ಒಂದಷ್ಟು ತದಕಿದ ಮೇಲೆ ಪೊಲೀಸರು ಬಂದು ಕರೆದೊಯ್ದರು.
ಈ ಘಟನೆ ಹಂಚಿಕೊಳ್ಳಲು ಕಾರಣವಿಷ್ಟೆ. ಆತ ಒಂದೊಂದು ಬಾರಿ ಒಂದೊಂದು ರಾಜ್ಯದ ಹೆಸರು ಹೇಳುತ್ಯಿದ್ದ. ಒಮ್ಮೆ ಬೆಂಗಳೂರು, ಒಮ್ಮೆ ಬಿಹಾರ, ಮತ್ತೊಮ್ಮೆ ಜಾರ್ಖಂಡ್… ಇವರ ಒಂದು ಗ್ಯಾಂಗೇ ಇರಬಹುದು. ನಾಳೆ ನಿಮ್ಮ ಮನೆಯ ಹೆಣ್ಮಕ್ಕಳಿಗೂ ಇಂಥ ಅನುಭವ ಆಗಬಹುದು. ಕಿಮ್ಸ್ ಸರ್ಕಲ್ ನಂಥ ಜನಸಂದಣಿಯ ಪ್ರದೇಶದಲ್ಲೇ ಅಸಭ್ಯ ವರ್ತನೆ ತೋರುವ ಇಂತಹ ನೀಚ ಪರರಾಜ್ಯದವರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಸಿಗುವವರನ್ನು ಬಿಟ್ಟಾರೆಯೇ. ಇಂಥ ಘಟನೆಗಳನ್ನು ಪೊಲೀಸರು ಹಗುರವಾಗಿ ಪರಿಗಣಿಸಿದರೆ ಮುಂದೊಂದು ದಿನ ದೆಹಲಿ ಮುಂಬಯಿ ಮೈಸೂರಿನಲ್ಲೆಲ್ಲಾ ನಡೆದ ಘಟನೆ ಹುಬ್ಬಳ್ಳಿಯಲ್ಲೂ ಘಟಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಂಗೆ ಕಣ್ಣು ಕಾಣಿಸಲ್ಲ, ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ – ಲಸಿಕೆಗೆ ಅಜ್ಜಿ, ಅಜ್ಜ ನಿರಾಕರಣೆ
ಒಟ್ಟಾರೆ ಮಹಿಳಾ ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಸ್ಥಳೀಯರು ಹಿಡಿದು ಥಳಿಸಿದಲ್ಲದೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಶದಲ್ಲಿರುವ ಯುವಕ ಒಮ್ಮೆ ತಾನೂ ಬೆಂಗಳೂರು. ಇನ್ನೊಮ್ಮೆ ಬಿಹಾರ. ಮತ್ತೊಮ್ಮೆ ಕೇಳಿದಾಗ ಜಾರ್ಖಂಡ್ ಮೂಲದವನು ಎಂದು ಹೇಳುತ್ತಿರುವ ಕಾರಣ ಯುವಕನನ್ನು ವಶಕ್ಕೆ ಪಡೆದಿರುವ ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸರು ಆತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.