– ಇದರಲ್ಲಿ ಏನು ವಿಶೇಷ ಇಲ್ಲ ಎಂದ್ರು
ಹುಬ್ಬಳ್ಳಿ: ತುಂಬು ಗರ್ಭಿಣಿಯಾದರೂ ಕೂಡ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ರೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಪದ್ಮಮ್ಮ ಶಹರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದವರಾದ ಪದ್ಮಮ್ಮ, ಶಹರ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೀಗ ತುಂಬು ಗರ್ಭಿಣಿಯಾಗಿದ್ದಾರೆ. ಆದರೂ ಪದ್ಮಮ್ಮ ಅದ್ಯಾವುದನ್ನು ಲೆಕ್ಕಿಸದೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಂತೆ ಡ್ಯೂಟಿ ಮಾಡುತ್ತಿದ್ದಾರೆ.
ಗುರುವಾರ ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ಪರ ವಾದ ಮಂಡಿಸಲು ಬಂದಿದ್ದ ವಕೀಲರ ತಂಡಕ್ಕೆ ಇವರು ರಕ್ಷಣೆ ನೀಡುವ ಜವಾಬ್ದಾರಿಯನ್ನು ಹೊತ್ತಿದರು. ಈ ವೇಳೆ ಇವರನ್ನು ಮಾತನಾಡಿಸಲು ಮುಂದಾದಾಗ ಪದ್ಮಮ್ಮ ಅವರು ಪ್ರತಿಕ್ರಿಯೆ ನೀಡಲು ಹಿಂಜರಿದರು.
ನಂತರ ಮಾತನಾಡಿದ ಅವರು, ಇದು ನನ್ನ ಕೆಲಸ. ಹೀಗಾಗಿ ಮಾಡುತ್ತಿದ್ದೇನೆ. ಇದರಲ್ಲಿ ಏನು ವಿಶೇಷ ಇಲ್ಲ ಎಂದರು. ಪದ್ಮಮ್ಮ ಅವರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.