ಬೆಂಗಳೂರು: ನೆಲಮಂಗಲ ಪಟ್ಟಣದ ಸೊಂಡೆಕೊಪ್ಪ ಬೈಪಾಸ್ ಬಳಿ ಸರಗಳ್ಳತನಕ್ಕೆ ಯತ್ನಿಸಿ ಪರಾರಿ ಆಗುತ್ತಿದ್ದ ಕಳ್ಳನನ್ನು ಸೆರೆಹಿಡಿದು ಮಹಿಳಾ ಹೋಮ್ ಗಾರ್ಡ್ ಒಬ್ಬರು ದಿಟ್ಟತನ ಮೆರೆದಿದ್ದಾರೆ.
ಹೋಮ್ ಗಾರ್ಡ್ ಚೈತ್ರಾ ಅವರು ಸರಗಳ್ಳತನಕ್ಕೆ ಯತ್ನಿಸಿದ ಆರೋಪಿ ಉಮೇಶ್‍ನನ್ನು ಸೆರೆಹಿಡಿದಿದ್ದಾರೆ. ನೆಲಮಂಗಲ ಪಟ್ಟಣದ ಸೊಂಡೆಕೊಪ್ಪ ಬೈಪಾಸ್ ಬಳಿ ಬೈಕ್ ನಲ್ಲಿ ಉಮೇಶ್ ಹಾಗೂ ತನ್ನ ಸ್ನೇಹಿತನ ಜೊತೆ ಬಂದು ನಿಂತುಕೊಂಡಿದ್ದ.

ಬೈಪಾಸ್ ಬಳಿ ನಿಂತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಹಾಗೂ ಪರ್ಸ್ ಕಸಿಯಲು ಇಬ್ಬರು ಯತ್ನಿಸಿದ್ದಾರೆ. ಈ ವೇಳೆ ಇದನ್ನು ಗಮನಿಸಿದ ಮಹಿಳಾ ಹೋಮ್ ಗಾರ್ಡ್ ತಕ್ಷಣ ಹೋಗಿ ಉಮೇಶ್‍ನನ್ನು ಹಿಡಿದಿದ್ದಾರೆ. ಇದನ್ನು ನೋಡಿದ ಇನ್ನೋರ್ವ ಎಸ್ಕೇಪ್ ಆಗಿದ್ದಾನೆ. ಆತನನ್ನು ಬೆಂಡೆತ್ತಿ ಕಾಲರ್ ಪಟ್ಟಿ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಮಹಿಳಾ ಹೋಮ್ ಗಾರ್ಡ್ ಕಳ್ಳನನ್ನು ಹಿಡಿಯುತ್ತಿದ್ದಂತೆ ಸ್ಥಳೀಯರು ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಾಗೆಯೇ ದಿಟ್ಟತನದಿಂದ ಕಳ್ಳನನ್ನು ಸ್ಥಳದಲ್ಲೇ ಸೆರೆಹಿಡಿದ ಮಹಿಳಾ ಹೋಮ್ ಗಾರ್ಡ್ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

