ಬೆಂಗಳೂರು: ಮನೆ ಮನೆಗೆ ಎಣ್ಣೆ ಪಾರ್ಸೆಲ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿ ಇಂದು ಸರ್ಕಾರದ ಮುಂದೆ ಆ ಪ್ರಸ್ತಾಪವೇ ಇಲ್ಲ ಎಂದ ಅಬಕಾರಿ ಸಚಿವ ಎಚ್ ನಾಗೇಶ್ ವಿರುದ್ಧ ಮಹಿಳೆಯರು ಕಿಡಿಕಾರಿದ್ದಾರೆ.
ಮನೆಯಲ್ಲಿ ಕುಡ್ಕೊಂಡು ಇರಿ. ಮಿನಿಸ್ಟರ್ ಆಗೋಕೆ ತಾವು ಲಾಯಕ್ಕಲ್ಲ ಎಂದು ಕುರುಬರಹಳ್ಳಿ ಮಹಿಳಾ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಟಾರ್ಗೆಟ್ ಹೆಚ್ಚಳ ಮಾಡಿ ಪರೋಕ್ಷವಾಗಿ ಜನರನ್ನು ಮದ್ಯ ವ್ಯಸನಿಯನ್ನಾಗಿ ಮಾಡಲು ಸಚಿವ ನಾಗೇಶ್ ರೆಡಿಯಾಗಿದ್ದಾರೆ ಎಂದು ಸಿಟ್ಟಿಗೆದ್ದ ಮಹಿಳೆಯರು ಎಣ್ಣೆ ಬಾಟಲಿ ಪಾರ್ಸೆಲ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಮದ್ಯಪಾನ ಮುಕ್ತ ಕರ್ನಾಟಕದ ಕನಸು ನಾವು ಕಾಣುತ್ತಿದ್ದರೆ ಸಚಿವರು ಬಾಯಿಗೆ ಬಂದ ಹಾಗೆ ಮಾತಾನಾಡುತ್ತಿದ್ದಾರೆ. ಇವರ ಪತ್ನಿಯಾದರೂ ಕೊಂಚ ಬುದ್ಧಿ ಹೇಳಲಿ ಎಂದು ಸಂಘಟನಾ ಸದಸ್ಯರು ಕಿಡಿಕಾರಿದ್ದಾರೆ.
Advertisement
ಮದ್ಯಪಾನ ನಿಷೇಧ ಮಾಡಬೇಕು ಎಂದು ಮಹಿಳೆಯರು ಹಾಗೂ ಕೆಲ ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾರೆ. ಅವರು ಒಳ್ಳೆಯ ದೃಷ್ಟಿಯಿಂದಲೇ ಹೇಳುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಬೇಕಲ್ವ ಎಂದು ಸಚಿವರು ಪ್ರಶ್ನಿಸಿದ್ದರು. ಅಲ್ಲದೆ ಯಾರೋ ಕೆಲವು ಮಹಿಳೆಯರು ಹೇಳಿದ್ದಾರೆ ಎಂದು ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದೂ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಯನ್ನು ಮಹಿಳಾ ಹೋರಾಟಗಾರ್ತಿಯರು ಖಂಡಿಸಿದ್ದಾರೆ.
Advertisement
ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಚಿವರು, ಮನೆ ಮನೆಗೆ ಮದ್ಯ ಪಾರ್ಸೆಲ್ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ತಿಳಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಅಬಕಾರಿ ಸಚಿವರು ಇಂದು ಮತ್ತೆ ಸುದ್ದಿಗೋಷ್ಠಿ ಕರೆದು ಬಾಯಿ ತಪ್ಪಿನಿಂದ ಹಾಗೆ ಆಗಿದೆ. ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.