ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

Public TV
2 Min Read
KWR BABY

ಕಾರವಾರ: ಕುಮಟಾ ಪಟ್ಟಣದ ಸುಭಾಸ್ ರಸ್ತೆಯ ಪ್ರಸಿದ್ಧ ಡಾ.ಜಾನು ಆಸ್ಪತ್ರೆಯಲ್ಲಿ ಗರ್ಭಿಣಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದು, ತಾಯಿ, ಮಗು ಸುರಕ್ಷಿತರಾಗಿದ್ದಾರೆ.

KWR BABY 1

ಜಿಲ್ಲೆಯಲ್ಲಿಯೇ ಪ್ರಸಿದ್ಧಿಗಳಿಸಿರುವ ಡಾ.ಜಾನು ಮಣಕಿಕರ್ಸ್ ಮೆಟರ್ನಿಟಿ ಮತ್ತು ನರ್ಸಿಂಗ್ ಹೋಂನಲ್ಲಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದವರು ಗೋಕರ್ಣದ ಗಂಗಾವಳಿ ನಿವಾಸಿಯಾದ 24 ವರ್ಷದ ಹಲೀಮಾ ಸಾದಿಕ್ ಸಾಬ್. ಇವರಿಗೆ 7ನೇ ತಿಂಗಳಿನಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣ ಜಾನು ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಗರ್ಭಿಣಿಯನ್ನು ಪರೀಕ್ಷಿಸಿದ ಡಾ.ಪ್ರಶಾಂತ್ ಮಣಕಿಕರ್ ಅವರು ನಾರ್ಮಲ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಸುರಕ್ಷಿತ ಮತ್ತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದರಿಂದ ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 664 ಪಾಸಿಟಿವ್ ಕೇಸ್, 8 ಸಾವು

KWR BABY 2

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಆದರೂ ಚಿಕ್ಕ ಶಿಶುಗಳ ಆರೋಗ್ಯ ಸುರಕ್ಷತಾ ದೃಷ್ಠಿಯಿಂದ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಶಿಶುಗಳನ್ನು ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ. ಜಾನು ಆಸ್ಪತ್ರೆಯ ಡಾ ಪ್ರಶಾಂತ ಮಣಕಿಕರ್ ಅವರು ಉತ್ತಮ ಸ್ತ್ರೀರೋಗ ತಜ್ಞ ವೈದ್ಯರಾಗಿದ್ದು, ಅವರು 10 ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗಲೂ ಎರಡು ಗರ್ಭೀಣಿಯರಿಗೆ ಈ ರೀತಿ ಯಶಸ್ವಿ ಹೆರಿಗೆ ಮಾಡಿಸಿದ್ದು, ಅವರು ಕೂಡ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅದರಂತೆ ಡಾ ಪ್ರಶಾಂತ್ ಮಣಕಿಕರ್ ಅವರ ಅಜ್ಜ ಜಾನು ಮಣಕಿಕರ್ ಮತ್ತು ತಂದೆ ಕಮಲಾಕರ್ ಮಣಕಿಕರ್ ಪ್ರಸಿದ್ಧ ವೈದ್ಯರಾಗಿದ್ದರು. ಇದನ್ನೂ ಓದಿ: ಮಕ್ಕಳ ಸ್ನೇಹ ಬೆಳೆಸಿದ ಕಾಡು ಗಿಳಿ- ಫೋಟೋ ವೈರಲ್

ಡಾ ಜಾನು ಎಂದರೆ ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡ ವೈದ್ಯರಾಗಿದ್ದರು. ಅಜ್ಜ ಮತ್ತು ತಂದೆಯವರ ಸೇವಾಭಾವವನ್ನು ಡಾ.ಪ್ರಶಾಂತ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದು, ತಮ್ಮ ಅಜ್ಜನ ಹೆಸರಿನಲ್ಲಿರುವ ಆಸ್ಪತ್ರೆಯಲ್ಲೂ ಬಡ ಜನರಿಗೆ ಅತೀ ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ 1964ರಲ್ಲಿ ಆರಂಭವಾದ ಡಾ.ಜಾನು ಮಣಕಿಕರ್ಸ್ ಮೆಟರನಿಟಿ ಮತ್ತು ನರ್ಸಿಂಗ್ ಹೋಮ್ 57 ವರ್ಷಗಳಿಂದ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿಯೇ ಹೆಸರುಗಳಿಸಿದೆ. ಈ ಪ್ರಸಿದ್ಧ ಆಸ್ಪತ್ರೆಗೆ ನ್ಯಾಷನಲ್ ಎಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ ಆ್ಯಂಡ್ ಹೆಲ್ತ್ ಕೇರ್ ಪ್ರೊವೈಡರ್ ಎಂಬ ಪ್ರಮಾಣ ಪತ್ರ ಕೂಡ ದೊರೆತ್ತಿರುವುದು ರೋಗಿಗಳಿಗೆ ವೈದ್ಯರ ಬಗ್ಗೆ ಇನ್ನು ಹೆಚ್ಚಿನ ವಿಶ್ವಾಸ ಮೂಡುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *