ಮೈಸೂರು: ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೊಟೇಲ್, ಪಬ್ ಗಳಲ್ಲಿ ಗಂಡು ಮಕ್ಕಳು ಕುಡಿಯುತ್ತಾರೆ. ಹಾಗೆಯೇ ನಾನು ಕುಡಿಯುತ್ತೇನೆ ಎಂಬ ಈ ಸಮಾನತೆ ನಮಗೆ ಬೇಡ. ನಮಗೆ ಸ್ವತಂತ್ರ ಬೇಕು. ಸ್ವೇಚ್ಛಾಚಾರ ಬೇಡ. ಯಾವುದರಲ್ಲಿ ನಮಗೆ ಉಪಕಾರ ಇದೆಯೋ ಅದರಲ್ಲಿ ಮಾತ್ರ ಸಮಾನತೆ ಇದ್ದರೆ ಸಾಕು ಎಂದು ಅವರು ತಿಳಿಸಿದ್ರು.
ಸಮಾನತೆ ಎಲ್ಲದರಲ್ಲೂ ಬೇಡ. ಪುರುಷರಿಗೂ ನಮ್ಮ ಜೊತೆ ಸಮಾನತೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ನಮಗೂ ಕೂಡ ಪುರುಷರ ಜೊತೆ ಸಮಾನತೆ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇವರ ಸೃಷ್ಟಿಯಲ್ಲಿ ಯಾರು ಯಾರಿಗೆ ಯಾವುದು ಬೇಕು ಎನ್ನುವುದನ್ನು ದೇವರು ತೀರ್ಮಾನ ಮಾಡಿರುತ್ತಾರೆ. ಅದೇ ರೀತಿ ಆಗುತ್ತದೆ ಎಂದು ಹೇಳಿದ್ರು.
ಮಹಿಳೆಯರು ಪುರುಷರಿಗೆ ಸಮಾನರಲ್ಲ. ಪುರುಷರಿಗೆ ಇರುವ ಎಲ್ಲ ಸ್ವಾತಂತ್ರ್ಯವೂ ಮಹಿಳೆಯರಿಗೆ ಬೇಡ. ಮಹಿಳೆಯರ ವೈಯುಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆಯಾಗಿದೆ. ಪುರುಷರು ರಾತ್ರಿ ಪಬ್, ರೆಸ್ಟೋರೆಂಟ್‍ನಲ್ಲಿ ಕುಡಿಯುತ್ತಾರೆ. ಮಹಿಳೆಯರಿಗೂ ಅಂತಹ ಸ್ವಾತಂತ್ರ್ಯ ಬೇಕು ಎಂದು ನಾನು ಬಯಸುವುದಿಲ್ಲ ಎಂದರು.
ಮಹಿಳೆಯರಿಗೆ ಸಾಂಪ್ರದಾಯಿಕ ಇತಿಮಿತಿಗಳಿವೆ. ಪ್ರತಿ ಧರ್ಮದಲ್ಲೂ ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿದೆ. ಆ ಚೌಕಟ್ಟನ್ನು ಮೀರಲು ನಾನು ಬಯಸುವುದಿಲ್ಲ. ಶಬರಿಮಲೆ ದೇವಾಲಯ ಪ್ರವೇಶಕ್ಕೂ ನಮ್ಮ ವಿರೋಧವಿದೆ. ಮುಸ್ಲಿಂ ಮಹಿಳೆಯರ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ತ್ರಿವಳಿ ತಲಾಕ್ ನಿಷೇಧ ಹೇರಲಾಗಿದೆ ಅಂದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv