ಧಾರವಾಡ: ರಸ್ತೆ ಪಕ್ಕದಲ್ಲಿ ನಿಂತ ಐದು ಜನರ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, 4 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ನಡೆದಿದೆ.
ಬಸವ್ವ ತಳವಾರ (50) ಮೃತ ದುರ್ದೈವಿ. ಧಾರವಾಡದಿಂದ ಸವದತ್ತಿ ತಾಲೂಕಿನ ಕಡೆಗೆ ಹೊರಟ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಚಾಲಕ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕೆಎ-25 ಡಿ-6449 ನಂಬರ್ ಟಿಪ್ಪರ್ ಜನರಿಗೆ ಡಿಕ್ಕಿ ಹೊಡೆದ ತಕ್ಷಣ ಸ್ಥಳದಲ್ಲಿದ್ದ ಜನರು ಗಾಯಗೊಂಡವರಿಗೆ ಆರೈಕೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಾಯಾಳುಗಳಾದ ಜಾಕೀರ್ ಹುಸ್ಸೇನ್ ಮುಲ್ಲಾ (35), ರೇಣುಕಾ ಹೊಂಬಳ(35), ಮಲ್ಲಿಕಾರ್ಜುನ ಹನುಮಂತಪ್ಪ ನವಲೂರು(40) ಮತ್ತು ರಿಯಾಜ್ ಖಾನ್ (40) ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಟಿಪ್ಪರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.