ಬೆಂಗಳೂರು: ಗ್ರಾಮದಲ್ಲಿ ನೀರಿನ ಅಭಾವ ಉಂಟಾದ ಕಾರಣಕ್ಕೆ ಬಟ್ಟೆ ತೊಳೆಯಲು ಕಲ್ಲಿನ ಕ್ವಾರಿಗೆ ಹೋಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನೆಲಮಂಗಲ ಸಮೀಪದ ಕಂಬದಕಲ್ ಗ್ರಾಮದಲ್ಲಿ ನಡೆದಿದೆ.
ಕಂಬದಕಲ್ ಗ್ರಾಮದ ನಿವಾಸಿ ಮಂಜುಳ (42) ಮೃತ ದುರ್ದೈವಿ. ಗ್ರಾಮದಲ್ಲಿ ನೀರಿನ ಬವಣೆ ಇದ್ದ ಕಾರಣಕ್ಕೆ ಕಲ್ಲಿನ ಕ್ವಾರಿಯೊಂದರಲ್ಲಿ ಬಟ್ಟೆ ತೊಳೆಯಲು ಮಹಿಳೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಕ್ವಾರಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆ ಸಾವಿಗೆ ಗ್ರಾಮ ಪಂಚಾಯ್ತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಬಿಟ್ಟಸಂದ್ರ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪೀಠೋಪಕರಣ ಧ್ವಂಸ ಮಾಡಿ, ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ನೀರಿನ ಸರಬರಾಜು ಮಾಡದೆ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ತೋರಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ ಪಂಚಾಯ್ತಿಯ ವಾಟರ್ ಮ್ಯಾನ್ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.