ಬೆಂಗಳೂರು: ಟೈರ್ ಸ್ಫೋಟಗೊಂಡು ಕಾರೊಂದು ಪಲ್ಟಿಯಾಗಿ ಕೆರೆಗೆ ಬಿದ್ದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಬಳಿ ನಡೆದಿದೆ.
ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಮೃತ ಮಹಿಳೆಯನ್ನು ಮಮತಾ (35) ಎಂದು ಗುರುತಿಸಲಾಗಿದೆ. ಪತಿ ಆನಂದ್ ಗಂಭೀರ ಗಾಯಗೊಂಡಿದ್ದಾರೆ. ಹುಲಿಮಂಗಲದಿಂದ ಜಿಗಣಿ ಕಡೆಗೆ ದಂಪತಿ ಬರುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದೆ.
ಟೈರ್ ಸ್ಫೋಟಗೊಂಡು ಕಾರು ನಿಯಂತ್ರಣ ತಪ್ಪಿ ಜಿಗಣೆ ಕೆರೆಯಲ್ಲಿ ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.