ಬಳ್ಳಾರಿ: ಜನ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಬಳ್ಳಾರಿಯಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆಯಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕಾಗಿ ತಮ್ಮ ಜಾತಿ ಪ್ರಮಾಣ ಪತ್ರವನ್ನೇ ಬದಲಿಸಿ, ಕಳೆದ ನಾಲ್ಕು ವರ್ಷಗಳಿಂದ ಸುಳ್ಳು ಪ್ರಮಾಣ ಪತ್ರ ನೀಡಿ ಅಧ್ಯಕ್ಷೆಯಾಗಿ ಅಧಿಕಾರ ಅನುಭವಿಸಿದ್ದರೂ ಆ ಸ್ಥಾನವನ್ನು ಮಹಿಳೆಯೊಬ್ಬರು ಬಿಟ್ಟು ಕೊಡುತ್ತಿಲ್ಲ. ಜೊತೆಗೆ ಹೈಕೋರ್ಟ್ ಆದೇಶ ಮಾಡಿದ್ದರೂ ಕ್ಯಾರೇ ಎನ್ನುತ್ತಿಲ್ಲ.
ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಆದರೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾತ್ರ ತಮಗೂ ಹೈಕೋರ್ಟ್ ಆದೇಶಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದು ನ್ಯಾಯಾಲಯದ ಆದೇಶ ಪಾಲಿಸದೆ ದರ್ಪ ತೋರುತ್ತಿದ್ದಾರೆ. ಈ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಪ್ರವರ್ಗ 2ಎ ಗೆ ಮೀಸಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷೆ ಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ನಕಲಿ ಪ್ರಮಾಣ ಪತ್ರ ಎನ್ನುವುದು ಗ್ರಾಮದ ಎಲ್ಲರಿಗೂ ಗೊತ್ತಿದ್ದರೂ ಏನು ಮಾಡದ ಪರಿಸ್ಥಿತಿ ಇತ್ತು. ಆದರೆ ಪ್ರವರ್ಗ 2ಎ ಗೆ ಸೇರಿದ ಮತ್ತೊಬ್ಬ ಗ್ರಾಮ ಪಂಚಾಯ್ತಿ ಸದಸ್ಯೆ ರೇಖಾ ಸೊನ್ನದ ಅವರು ಇದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Advertisement
Advertisement
ಧಾರವಾಡ ಹೈಕೋರ್ಟ್ ಬೆಂಚ್ ರೇಖಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಯರಳ್ಳಿ ರತ್ನಮ್ಮಾ ಅವರು ಸಲ್ಲಿಸಿದ್ದ ನಕಲಿ ಜಾತಿ ಪ್ರಮಾಣ ಪತ್ರವನ್ನು ನಕಲಿ, ಕೂಡಲೇ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತ್ತು.
Advertisement
ಹೈಕೋರ್ಟ್ ಆದೇಶ ಮಾಡಿ 8 ತಿಂಗಳು ಕಳೆದರೂ ಈ ಆದೇಶವನ್ನು ಯಾರು ಪಾಲಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಕೂಡ ಅಧ್ಯಕ್ಷೆ ಸ್ಥಾನವನ್ನು ಬಿಟ್ಟು ಕೊಡಲು ತಯಾರಿಲ್ಲ. ಇತ್ತ ಹೂವಿನಹಡಗಲಿ ತಾಲೂಕಿನ ಮಾನ್ಯ ತಹಶೀಲ್ದಾರರು ಸಹ ಹೈಕೋರ್ಟ್ ಆದೇಶ ಪಾಲಿಸದೆ ತಮಗೂ ಆದೇಶಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ.
Advertisement
ಹೈಕೋರ್ಟ್ ಆದೇಶ ಮಾಡಿ 8 ತಿಂಗಳೇ ಕಳೆದಿವೆ. ಜೊತೆಗೆ ಇನ್ನು ಎರಡು ತಿಂಗಳಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ನಿಗದಿ ಆಗಲಿದೆ. ಆದರೆ ಎರಡು ತಿಂಗಳಾದರೂ ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡಲಿ ಎಂಬುದು ರೇಖಾ ಅವರ ವಾದವಾಗಿದ್ದು, ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲ ಎಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ.