ರಾಯಚೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬರು ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಸೀಮಾ(28), ಮಹ್ಮದ್ ಹನೀಫ್(5), ಐಯಾನ್(3) ಹಾಗೂ ರಿಗಾನ್(1) ಮೃತಪಟ್ಟ ತಾಯಿ-ಮಕ್ಕಳು. ದೇವದುರ್ಗ ತಾಲೂಕಿನ ಕೊದ್ದೊಡ್ಡಿ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯಲ್ಲಿ ನಾಲ್ಕು ಜನರ ಶವ ಪತ್ತೆಯಾಗಿವೆ.
ಐದು ವರ್ಷಗಳ ಹಿಂದೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದ ನಸೀಮಾಳನ್ನು ಸಿರವಾರದ ಅತ್ತನೂರು ಗ್ರಾಮದ ಮಹಿಬೂಬ್ ಜೊತೆ ಮದುವೆ ಮಾಡಲಾಗಿತ್ತು. ನಸಿಮಾಳಿಗೆ ಮೂರು ಮಕ್ಕಳಾಗಿದ್ದು, ಪತಿಯ ಮನೆಯಲ್ಲಿ ದಿನನಿತ್ಯ ಕಿರುಕುಳ ನೀಡಲಾಗುತ್ತಿತ್ತು.
ಕಿರುಕುಳದಿಂದ ಬೇಸತ್ತ ನಸೀಮಾ ಸಿರವಾರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಅತ್ತನೂರು ಗ್ರಾಮದಿಂದ ತೆರಳಿ ಕಾಲುವೆಗೆ ತನ್ನ ಮೂವರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ಮಾಡಿ ನೀನು ದರಿದ್ರದವಳು ಎಂದು ನಸೀಮಾಳನ್ನು ಪತಿ, ಅತ್ತೆ, ನಾದಿನಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಪತಿ ಮಹಿಬೂಬ, ಅತ್ತೆ ಹಮೀದಾ, ಮೈದುನಾ ಮುಸ್ತಫಾ ಮತ್ತು ನಾದಿನಿ ಮುಮ್ತಾಜ್ ರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.