ಮೈಸೂರು: ಜಿಲ್ಲೆಯಲ್ಲಿ ಐಪಿಎಸ್ ಪ್ರೊಬೆಷನರಿ ಅಧಿಕಾರಿಯ ಸೋಗಿನಲ್ಲಿ ಮಹಿಳೆಯೊಬ್ಬಳು ವಂಚಿಸಿದ್ದಾಳೆ. ಹೀಗೆ ವಂಚಿಸುತ್ತಿದ್ದ ಮಹಿಳೆಯನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾವಣ್ಯ ಭಾನು ವಂಚನೆ ಮಾಡಿದ ಮಹಿಳೆ. ಲಾವಣ್ಯ ಹುಣಸೂರಿನ ಕಲ್ಕುಣಿಕೆ ನಿವಾಸಿಯಾಗಿದ್ದು, ಹೆಚ್.ಡಿ ಕೋಟೆ ತಾಲೂಕಿನ ಹೆಬ್ಬಲಕುಪ್ಪೆ ಗ್ರಾಮದ ಯೋಧ ಲೋಕೇಶ್ ಅವರನ್ನು ಮ್ಯಾಟ್ರಿಮೋನಿ ವೆಬ್‍ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಳು.
ಲಾವಣ್ಯ ತಾನು ಐಪಿಎಸ್ ಅಧಿಕಾರಿ ಎಂದು ಹೇಳಿ ಯೋಧ ಲೋಕೇಶ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಳು. ನಂತರ ಮದುವೆ ಖರ್ಚಿಗೆ 13 ಲಕ್ಷ ಹಣ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಹಾಗೂ ಮನೆಯವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದಾಳೆ.
ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಯೋಧ ಲೋಕೇಶ್ ಹುಣಸೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ವಿಚಾರಣೆ ವೇಳೆ ಲಾವಣ್ಯ ನಕಲಿ ಐಪಿಎಸ್ ಎನ್ನುವ ಮಾಹಿತಿ ಬಹಿರಂಗವಾಗಿದೆ. ಆರೋಪಿ ಲಾವಣ್ಯ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.