ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಹಣ ಪಡೆದು ಮೋಸ ಮಾಡಿ 15 ದಿನದಿಂದ ತಲೆಮರೆಸಿಕೊಂಡಿದ್ದ ವಂಚಕಿಯನ್ನು ಹಿಡಿದು ಚೆನ್ನಾಗಿ ಥಳಿಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ರಾಜರಾಜೇಶ್ವರಿ ನಗರದ ರತ್ನಮ್ಮ ಎಂಬಾಕೆ ಸುಮಾರು 50 ಕ್ಕೂ ಹೆಚ್ಚು ಮಂದಿ ಬಳಿ ಚೀಟಿ ಕಟ್ಟಿಸಿಕೊಂಡು ಹಣ ನೀಡದೇ ವಂಚಿಸಿದ್ದಳು. ಪ್ರತಿನಿತ್ಯ ಚೀಟಿ ಕಟ್ಟಿರುವ ಮಂದಿ ಹಣ ನೀಡುವಂತೆ ಒತ್ತಾಯಿಸಿ ರಾತ್ರಿ ಮನೆ ಬಳಿ ಜಮಾಯಿಸಿ ರತ್ನಮ್ಮಳಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ತಲೆ ಮರೆಸಿಕೊಂಡಿದ್ದ ರತ್ನಮ್ಮ, ಶನಿವಾರ ದೀಢಿರ್ ಮನೆಗೆ ಬಂದು ಸೇರಿಕೊಂಡಿದ್ದಳು. ಈ ವಿಚಾರ ತಿಳಿದ ವಂಚನೆಗೊಳಗಾದವರು ರಾತ್ರಿ ಮನೆ ಬಳಿ ಬಂದು ರತ್ನಮ್ಮಳನ್ನ ಹೊರಗೆ ಕರೆದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಮನೆ ಬಳಿ ಗಲಾಟೆ ಹೆಚ್ಚಾಗುತ್ತಿದ್ದಂತೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಮೋಸ ಹೋದವರೆಲ್ಲರು ಸೇರಿಕೊಂಡು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹದನೈದು ವರ್ಷದಿಂದ ಚೀಟಿ ವ್ಯವಹಾರ ಮಾಡ್ತಿದ್ದ ರತ್ನಮ್ಮ, ಕೆಲ ದಿನಗಳಿಂದ ಚೀಟಿ ಹಣ ವಾಪಸ್ ನೀಡದೇ ಮೋಸ ಮಾಡ್ತಿದ್ಲು. ಹಣ ಕೇಳಿದ್ರೆ ಹೆಸರು ಬರೆದಿಟ್ಟು ನೇಣು ಹಾಕಿಕೊಳ್ಳುವುದಾಗಿ ಬೆದರಿಸುತ್ತಿದ್ದಳು ಅಂತಾ ವಂಚನೆಗೊಳಗಾದವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.