– ಆಯ್ದ ರಾಜ್ಯಗಳ ಹಣಕಾಸು ಸ್ಥಿತಿ ಏರುಪೇರಾಗಬಹುದು
ನವದೆಹಲಿ: ವಿವಿಧ ರಾಜ್ಯಗಳು ಘೋಷಿಸಿರುವ ಮಹಿಳಾ ಕೇಂದ್ರಿತ ನೇರ ಲಾಭ (DBT) ವರ್ಗಾವಣೆ ಯೋಜನೆಗಳು ರಾಜ್ಯದ ಹಣಕಾಸಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವರದಿಯೊಂದು ಎಚ್ಚರಿಸಿದೆ.
ಮಹಿಳೆಯರಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ (Election) ಸಂದರ್ಭದಲ್ಲಿ ಘೋಷಣೆಯಾಗುತ್ತಿವೆ. ಅಂತಹ ಉಪಕ್ರಮಗಳು ರಾಜ್ಯ ಹಣಕಾಸಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ವರದಿ ತಿಳಿಸಿದೆ.
ಎಂಟು ರಾಜ್ಯಗಳಲ್ಲಿ ಈ ಯೋಜನೆಗಳ ಒಟ್ಟು ವೆಚ್ಚವು ಈಗ 1.5 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದು ಈ ರಾಜ್ಯಗಳ ಆದಾಯದ 3-11 ಪ್ರತಿಶತದಷ್ಟಿದೆ ಎಂದು ವರದಿಯು ಹೈಲೈಟ್ ಮಾಡಿದೆ.
ಒಡಿಶಾದಂತಹ ಕೆಲವು ರಾಜ್ಯಗಳು ಹೆಚ್ಚಿನ ತೆರಿಗೆಯೇತರ ಆದಾಯ ಮತ್ತು ಸಾಲದ ಅವಶ್ಯಕತೆಗಳಿಂದಾಗಿ ಈ ವೆಚ್ಚಗಳನ್ನು ಭರಿಸಲು ಉತ್ತಮ ಸ್ಥಿತಿಯಲ್ಲಿದ್ದರೂ ಇನ್ನೂ ಅನೇಕ ರಾಜ್ಯಗಳು ಹಣಕಾಸಿನ ಸವಾಲುಗಳನ್ನು ಎದುರಿಸಬಹುದು ಎಂದು ವರದಿ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ
ಯಾವ ರಾಜ್ಯದಲ್ಲಿ ಎಷ್ಟು ಹಣ ನಿಗದಿ?
ಕುಟುಂಬದ ಓರ್ವ ಮಹಿಳೆಗೆ ತಿಂಗಳಿಗೆ 2,000 ರೂ. ಒದಗಿಸುವ ಕರ್ನಾಟಕದ (Karnataka) ಗೃಹ ಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ರಾಜ್ಯದ ಆದಾಯದ 11% ರಷ್ಟಿದೆ.
ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ 1,000 ರೂ. ಅನುದಾನವನ್ನು ನೀಡುವ ಪಶ್ಚಿಮ ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಗೆ 14,400 ಕೋಟಿ ರೂ. ಮೀಸಲಿಡಲಾಗಿದೆ. ಇದು ರಾಜ್ಯದ ಆದಾಯದ 6% ರಷ್ಟಿದೆ.
ವಯಸ್ಕ ಮಹಿಳೆಯರಿಗೆ ತಿಂಗಳಿಗೆ ರೂ. 1,000 ರೂ. ಭರವಸೆ ನೀಡುವ ದೆಹಲಿಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ 2,000 ಕೋಟಿ ರೂ. ಅಗತ್ಯವಿದೆ. ಇದು ರಾಜ್ಯದ ಆದಾಯದ 3% ರಷ್ಟಿದೆ.
ಮಹಿಳೆಯರಿಗೆ ಹಣ ನೀಡುವ ಭರವಸೆಯ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಲು ಒತ್ತಡಕ್ಕೊಳಗಾಗಬಹುದು ಎಂದು ಎಸ್‌ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮಹಿಳೆಯರ ಸಬಲೀಕರಣ ಮತ್ತು ಚುನಾವಣಾ ಬೆಂಬಲ ಪಡೆಯಲು ಘೋಷಣೆಯಾಗುವ ಯೋಜನೆಗಳನ್ನು ಜಾರಿಗೆ ತರುವ ಮೊದಲು ರಾಜ್ಯಗಳು ತನ್ನ ಹಣಕಾಸಿನ ಸ್ಥಿತಿಗತಿ, ಸಾಲದ ಪ್ರಮಾಣ ಎಷ್ಟಿದೆ ಎಂದು ನೋಡಿಕೊಳ್ಳಬೇಕೆಂದು ವರದಿ ಒತ್ತಾಯಿಸಿದೆ.