ಚಿಕ್ಕಬಳ್ಳಾಪುರ: ‘ಹೆಣ್ ಮಕ್ಕಳೆ ಸ್ಟ್ರಾಂಗು ಗುರು’ ಅನ್ನೋ ಯೋಗರಾಜ್ ಭಟ್ಟರ ಸಾಲುಗಳನ್ನು ಅಕ್ಷರಶಃ ನಿಜವಾಗಿಸಿದ್ದಾರೆ. ಹಳ್ಳಿಗಳಲ್ಲಿ ಅಡುಗೆ ಮನೆಗೆ ಮಾತ್ರವೇ ಸೀಮಿತವಾಗುವಂತಹ ಮಹಿಳೆಯರ ನಡುವೆ ನಾವ್ ಯಾರಿಗೇನು ಕಮ್ಮಿ ಇಲ್ಲಾ ಅನ್ನೋ ಹಾಗೆ ಮಹಿಳೆಯರಿಬ್ಬರು ದಿಟ್ಟ ಹೆಜ್ಜೆ ಇಟ್ಟು ಟ್ರ್ಯಾಕ್ಟರ್ ಚಲಾಯಿಸುತ್ತಾ ಭರ್ಜರಿ ಕೃಷಿಕಾಯಕ ಮಾಡಿದ್ದಾರೆ.
ಟ್ರ್ಯಾಕ್ಟರ್ ನ ಸ್ಟೇರಿಂಗ್ ಹಿಡಿದು ಹೊಲದಲ್ಲಿ ಉಳುಮೆ ಮಾಡುವುದು ಮಾತ್ರವಲ್ಲ, ಪುರುಷರಿಗೆ ಸರಿಸಮಾನಾಗಿ ಸರಾಗವಾಗಿ ಟ್ರಾಕ್ಟರ್ ಚಾಲನೆ ಮಾಡುತ್ತಾ ಎಲ್ಲ ರೀತಿಯ ಕೃಷಿ ಕಾಯಕಗಳನ್ನ ಮಾಡುತ್ತಾರೆ. ಇವರು ಚಿಕ್ಕಬಳ್ಳಾಪುರ ತಾಲೂಕಿನ ಬೀರಗಾನಹಳ್ಳಿ ಗ್ರಾಮದ ಅಪರೂಪದ ಮಹಿಳೆಯರು.
Advertisement
Advertisement
ಗ್ರಾಮದ ಕೇಶವರೆಡ್ಡಿ ಅವರ ಪತ್ನಿ ಪ್ರಮೀಳಾ ಹಾಗೂ ಕೇಶವರೆಡ್ಡಿ ಸಹೋದರ ಚಂದ್ರಶೇಖರ್ ಅವರ ಪತ್ನಿ ಮಾನಸ ಎಂಬ ನಾದಿನಿಯರು ಕಳೆದ ಆರೇಳು ವರ್ಷಗಳಿಂದಲೂ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತಿದ್ದಾರೆ. ಪುರಷರಷ್ಟೇ ಸರಿಸಮಾನಾಗಿ ಸರಾಗವಾಗಿ ಮಿನಿ ಟ್ರ್ಯಾಕ್ಟರ್ ಚಾಲನೆ ಮಾಡುವ ಈ ಇಬ್ಬರು ಮಹಿಳೆಯರು ಟ್ರ್ಯಾಕ್ಟರ್ ಮೂಲಕ ಹೊಲ ಉಳುವುದು, ಕಳೆ ಕೀಳುವುದು, ದ್ರಾಕ್ಷಿ ತೋಟದಲ್ಲಿ ಔಷಧಿ ಸಿಂಪಡಿಸುವುದು ಸೇರಿದಂತೆ ಪುರುಷರಿಗೆ ಸರಿಸಮಾನಾಗಿ ನಾನಾ ಕೃಷಿಕಾಯಕಗಳನ್ನ ಮಾಡುತ್ತಿದ್ದಾರೆ.
Advertisement
Advertisement
ಸುಮಾರು 10 ಎಕರೆ ಕೃಷಿ ಭೂಮಿ ಹೊಂದಿರುವ ನಾವು ನಿತ್ಯ ಬೆಳಗ್ಗೆ ದ್ರಾಕ್ಷಿ, ಹೂಗಳನ್ನು ಮಾರುಕಟ್ಟೆಗೆ ತಲುಪಿಸುವದರಲ್ಲಿ ಬ್ಯುಸಿಯಾಗಿರುತ್ತೇವೆ. ಇತ್ತ ನಮ್ಮ ಪತ್ನಿಯರು ಟ್ರ್ಯಾಕ್ಟರ್ ಮೂಲಕ ಕೃಷಿ ಚಟುವಟಿಕೆ ಮಾಡುತ್ತಾರೆ. ಒಬ್ಬರು ಟ್ರ್ಯಾಕ್ಟರ್ ಏರಿ ಬಿತ್ತನೆ ಕಾರ್ಯ ನಡೆಸಿದರೆ, ಮತ್ತೊಬ್ಬರು ದ್ರಾಕ್ಷಿ ತೋಟದಲ್ಲಿ ಔಷಧಿ ಸಿಂಪಡಿಸುತ್ತಾರೆ. ತಮ್ಮ ಹೆಂಡತಿ ಇಷ್ಟೆಲ್ಲಾ ತಮಗೆ ಸಾಥ್ ಕೊಡುತ್ತಿರುವುದು ನಮಗೆ ಸಖತ್ ಖುಷಿ ತಂದಿದೆ ಅಂತ ಪ್ರಮೀಳಾ ಪತಿ ಕೇಶವರೆಡ್ಡಿ ಮತ್ತು ಮಾನಸ ಅವರ ಪತಿ ಚಂದ್ರಶೇಖರ್ ಹೇಳಿದ್ದಾರೆ.
ಮನೆಗೆಲಸ ಜೊತೆ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಈ ಮಹಿಳೆಯರ ಕಾರ್ಯ ಇಡೀ ಗ್ರಾಮಸ್ಥರನ್ನ ಹುಬ್ಬೇರಿಸುವಂತೆ ಮಾಡಿದೆ. ಗಂಡಂದಿರಿಗೆ ಹೆಗಲು ಕೊಡುತ್ತಾ ಕೃಷಿ ಕಾಯಕದಲ್ಲೂ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ಹಾಗೆ ತೊಡಗಿಸಿಕೊಂಡಿರುವ ಈ ಹೆಣ್ಮಕ್ಕಳ ಕಾಯಕ ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಲಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv