ನವದೆಹಲಿ: ಅಂತರ್-ಧರ್ಮ ವಿವಾಹವಾದ ನಂತರ ಮಹಿಳೆಯ ಧರ್ಮ ಗಂಡನ ಧರ್ಮದೊಂದಿಗೆ ವಿಲೀನವಾಗುವ ಪರಿಕಲ್ಪನೆಯನ್ನ ಕಾನೂನು ಸಮ್ಮತಿಸುವುದಿಲ್ಲ ಎಂದು ಗುರುವಾರದಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ 5 ಮಂದಿ ನ್ಯಾಯಾಧೀಶರು ಇರುವ ಸಾಂವಿಧಾನಿಕ ಪೀಠದಲ್ಲಿ ಅನ್ಯ ಧರ್ಮದ ಪುರುಷನನ್ನ ಮದುವೆಯಾದರೆ ಪಾರ್ಸಿ ಮಹಿಳೆ ತನ್ನ ಧರ್ಮದ ಗುರುತನ್ನು ಕಳೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯುತಿತ್ತು. ಈ ವೇಳೆ ಪತಿಯ ಧರ್ಮದೊಂದಿಗೆ ವಿಲೀನವಾಗುವ ಪರಿಕಲ್ಪನೆಯನ್ನ ಕಾನೂನು ಸಮ್ಮತಿಸುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Advertisement
Advertisement
ಪಾರ್ಸಿ ಮಹಿಳೆಯಾದ ಗೂಲ್ರುಖ್ ಎಂ. ಗುಪ್ತಾ ಹಿಂದೂ ವ್ಯಕ್ತಿಯನ್ನ ಮದುವೆಯಾಗಿದ್ದು, ಪಾರ್ಸಿ ಧರ್ಮದಲ್ಲೇ ನಾನು ಮುಂದುವರಿಯುತ್ತೇನೆ ಹಾಗೂ ತನ್ನ ತಂದೆಯ ಸಾವಿನ ಸಂದರ್ಭದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಅನುಮತಿ ನೀಡಬೇಕೆಂದು 2012ರಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಲ್ಸದ್ ಪಾರ್ಸಿ ಟ್ರಸ್ಟ್ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯನ್ ಅವರಿಗೆ ನ್ಯಾಯಪೀಠ ಸೂಚನೆ ನೀಡಿದ್ದು, ಗುಪ್ತಾ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗುತ್ತದೆಯಾ ಎಂದು ಡಿಸೆಂಬರ್ 14ರೊಳಗೆ ವಿವರ ನೀಡುವಂತೆ ಹೇಳಿದೆ.
Advertisement
ಪಾರ್ಸಿ ಮಹಿಳೆ ಹಿಂದೂ ವ್ಯಕ್ತಿಯನ್ನ ಮದುವೆಯಾದರೆ ಆಕೆ ಪಾರ್ಸಿ ಸಮುದಾಯದಲ್ಲಿ ತನ್ನ ಧಾರ್ಮಿಕ ಹಕ್ಕು ಕಳೆದುಕೊಳ್ಳುತ್ತಾಳೆ. ಹೀಗಾಗಿ ಆಕೆಯ ತಂದೆ ಸತ್ತಾಗ ಅಂತ್ಯಕ್ರಿಯೆ ನೆರವೇರಿಸಲು ಸೈಲೆನ್ಸ್ ಆಫ್ ಟವರ್ಗೆ ಭೇಟಿ ನೀಡುವಂತಿಲ್ಲ ಎಂಬ ಸಾಂಪ್ರದಾಯಿಕ ಕಾನೂನಿದ್ದು, ಇದನ್ನ 2010ರಲ್ಲಿ ಗುಜರಾತ್ ಹೈ ಕೋರ್ಟ್ ಎತ್ತಿ ಹಿಡಿದಿತ್ತು. ಗುಪ್ತಾ ಅವರು ಈ ಕಾನೂನನ್ನ ಪ್ರಶ್ನಿಸಿದ್ದಾರೆ.
Advertisement
ಬೇರೆ ಧರ್ಮದ ವ್ಯಕ್ತಿಯನ್ನ ಮದುವೆಯಾದ್ರೆ ಮಹಿಳೆ ತನ್ನ ಧಾರ್ಮಿಕ ಗುರುತು ಕಳೆದುಕೊಳ್ಳುತ್ತಾಳೆ ಎಂದು ಯಾವುದೇ ಕಾನೂನಿಲ್ಲ. ಅಲ್ಲದೆ ವಿಶೇಷ ವಿವಾಹ ಕಾಯ್ದೆಯ ಪ್ರಕಾರ ಇಬ್ಬರು ವ್ಯಕ್ತಿಗಳು ಮದುವೆಯಾಗಿ ಅವರವರ ಧರ್ಮವನ್ನು ಮುಂದುವರೆಸಿಕೊಂಡು ಹೋಗುವ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಒಬ್ಬ ವ್ಯಕ್ತಿ ಅನ್ಯಧರ್ಮೀಯ ಮಹಿಳೆಯನ್ನ ವಿವಾಹವಾಗಿ ತನ್ನ ಧರ್ಮವನ್ನ ಉಳಿಸಿಕೊಳ್ಳಬಹುದು. ಆದ್ರೆ ಮಹಿಳೆ ಬೇರೆ ಧರ್ಮದ ವ್ಯಕ್ತಿಯನ್ನ ಮದುವೆಯಾದ್ರೆ ಆಕೆಯ ಧರ್ಮವನ್ನ ಉಳಿಸಿಕೊಳ್ಳಲು ಯಾಕೆ ಅವಕಾಶವಿಲ್ಲ? ಮಹಿಳೆಯನ್ನ ಇದರಿಂದ ಪ್ರತ್ಯೇಕಿಸುವುದು ಯಾಕೆ ಎಂದು ನ್ಯಾಯ ಪೀಠ ಪ್ರಶ್ನಿಸಿದೆ.
ತನ್ನ ಧರ್ಮದ ಗುರುತಿನ ಬಗ್ಗೆ ತೀರ್ಮಾನಿಸುವ ಹಕ್ಕು ಮಹಿಳೆಗೆ ಮಾತ್ರ ಇದೆ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ಅಧಿಕೃತವಾಗಿದ್ದ ಸಂದರ್ಭದಲ್ಲಿ ಮಹಿಳೆ ಮದುವೆ ನಂತರ ಧರ್ಮವನ್ನ ಬದಲಾಯಿಸಿಕೊಳ್ಳುತ್ತಾಳೆ ಎಂದು ಊಹಿಸಿಕೊಳ್ಳುಂತಿಲ್ಲ ಎಂದು ಪೀಠ ಹೇಳಿದೆ.