– ಬಾಗಿದ ಬೆನ್ನುಮೂಳೆಯಿಂದ ಬಳಲುತ್ತಿರೋ ಮಹಿಳೆ
– 15 ಗಂಟೆಯಲ್ಲಿ 60 ಕಿ.ಮೀ ನಡೆದ ಮಹಿಳೆ
ಲಕ್ನೋ: 50 ವರ್ಷದ ಮಹಿಳೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿಯಲ್ಲಿ 500 ರೂಪಾಯಿ ಪಡೆದುಕೊಳ್ಳಲು ಬರೋಬ್ಬರಿ 30 ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡು ಹೋಗಿದ್ದಾರೆ. ಆದರೆ ವಾಪಸ್ ಬರಿಗೈಯಲ್ಲಿ ಬಂದಿರುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರಾಧಾ ದೇವಿ ಉತ್ತರ ಪ್ರದೇಶದ ಆಗ್ರಾದಿಂದ ಫಿರೋಜಾಬಾದ್‍ಗೆ 30 ಕಿ.ಮೀ ನಡೆದುಕೊಂಡು ಹೋಗಿದ್ದಾರೆ. ರಾಧಾ ದೇವಿ ಈಗಾಗಲೇ ಬಾಗಿದ ಬೆನ್ನುಮೂಳೆಯಿಂದ ಬಳಲುತ್ತಿದ್ದಾರೆ. ಮೂಲತಃ ಫಿರೋಜಾಬಾದ್ ಜಿಲ್ಲೆಯ ಹಿಮ್ಮರ್ ಪುರ್ ಗ್ರಾಮದ ನಿವಾಸಿ. ಆದರೆ ಆಗ್ರಾದ ಶಂಭು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸುಮಾರು 20 ವರ್ಷದಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
Advertisement
Advertisement
ಈ ಏರಿಯಾದಲ್ಲಿ ಕಳೆದ ಎರಡು ದಿನಗಳಿಂದ ಪ್ರಧಾನಿ ಮೋದಿ ಬಡವರಿಗೆ 500 ರೂಪಾಯಿ ಹಣ ಹಾಕುತ್ತಾರೆ ಎಂದು ಹೇಳಲಾಗಿದೆ. ಇದನ್ನು ನಂಬಿದ ರಾಧಾ ದೇವಿ ಫಿರೋಜಾಬಾದ್‍ನಲ್ಲಿರುವ ಬ್ಯಾಂಕಿಗೆ ತನ್ನ 15 ವರ್ಷದ ಮಗನ ಜೊತೆಗೆ ನಡೆದುಕೊಂಡು ಹೋಗಿದ್ದಾರೆ. ಎಸ್‍ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ರಾಧಾ ದೇವಿ ಅಲ್ಲಿನ ಸಿಬ್ಬಂದಿ ಬಳಿ 500 ರೂಪಾಯಿ ವಿತ್‍ಡ್ರಾ ಮಾಡುವ ಬಗ್ಗೆ ಕೇಳಿದ್ದಾರೆ. ಆದರೆ ರಾಧಾ ದೇವಿ ಬ್ಯಾಂಕ್ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ತೋರಿಸುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ನಿಮ್ಮ ಬ್ಯಾಂಕ್ ಖಾತೆ ಜನ್ ಧನ್ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಬೇಸರಗೊಂಡ ರಾಧಾ ದೇವಿ ಮತ್ತೆ 30 ಕಿ.ಮೀ ನಡೆದುಕೊಂಡು ತನ್ನೂರಿಗೆ ಬರಿಗೈಲಿ ವಾಪಸ್ ಬಂದಿದ್ದಾರೆ.
Advertisement
ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನಗಳ ಓಡಾಟ ಇಲ್ಲ, ಹೀಗಾಗಿ ಇವರಿಬ್ಬರು ಕಾಲ್ನಡಿಗೆಯಲ್ಲಿ ಒಟ್ಟು 60 ಕಿ.ಮೀ ನಡೆದಿದ್ದಾರೆ. ರಾಧಾ ದೇವಿ 15 ಗಂಟೆಯಲ್ಲಿ 60 ಕಿಲೋ ಮೀಟರ್ ನಡೆದಿದ್ದಾರೆ. ಕೆಲವು ಕಡೆಗಳಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಂಡು ನಡೆದುಕೊಂಡು ಊರನ್ನು ತಲುಪಿದ್ದಾರೆ.
Advertisement
ಈ ಬಗ್ಗೆ ಮಾತನಾಡಿದ ರಾಧಾ ದೇವಿ, ಪ್ರದಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಬಡವರ ಬ್ಯಾಂಕ್ ಖಾತೆಗೆ ತಲಾ 500 ರೂ. ಹಾಕಿದ್ದಾರೆ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಎಸ್‍ಬಿಐ ಬ್ಯಾಂಕ್‍ಗೆ ಹೋಗಲು ನಿರ್ಧರಿಸಿದೆ. ಆದರೆ ಲಾಕ್‍ಡೌನ್ ಕಾರಣ ನಾನು ನನ್ನ 15 ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗಿದ್ದೆ. ಆದರೆ ನನ್ನ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ಇರುವುದು ಗೊತ್ತಾಯಿತು. ಹೀಗಾಗಿ ವಾಪಸ್ ನಡೆದುಕೊಂಡು ಬಂದೆವು. ಜನ್ ಧನ್ ಖಾತೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೀಗಾಗಿ ಕೂಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ. ನನ್ನ ಪತಿ ಮತ್ತು ಮಕ್ಕಳು ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ ಎಂದು ತಮ್ಮ ನೋವನ್ನು ಹೇಳಿಕೊಂಡರು.
ಖಾತೆಯಲ್ಲಿ ಹಣ ಇಲ್ಲ ಎಂದು ತಿಳಿದು ರಾಧಾ ದೇವಿ ತುಂಬಾ ಬೇಸರ ಮಾಡಿಕೊಂಡಿದ್ದರು. ಆದರೆ ಮಾನವೀಯ ದೃಷ್ಟಿಯಿಂದ ನನ್ನ ಕೈಲಾದ ಸಹಾಯ ಮಾಡಿದೆ. ಅವರು ವಾಪಸ್ ನಡೆದುಕೊಂಡು ಆಗ್ರಾಗೆ ಹೋಗಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.