ಹೈದರಾಬಾದ್: ಕ್ಷುಲಕ ಕಾರಣಕ್ಕೆ ಪತಿಯ ಮೇಲೆ ಕೋಪಗೊಂಡು ಎರಡು ವರ್ಷದ ಕಂದಮ್ಮನ ಜೊತೆ ಕಟ್ಟಡದಿಂದ ಪತ್ನಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಬಾಲಾಜಿ ನಗರದಲ್ಲಿ ನಡೆದಿದೆ.
ಪದ್ಮಜಾ ಕಟ್ಟಡದಿಂದ ಹಾರಿ ಮೃತಪಟ್ಟ ಮಹಿಳೆ. ಮಗುವಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿಗೆ ಚಿಕಿತ್ಸೆ ನಡೆಯುತ್ತಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಪದ್ಮಜಾ ತನ್ನ ಪತಿಯನ್ನು ಕಾರ್ಯಕ್ರಮಕ್ಕಾಗಿ ಹೊರಗೆ ಕರೆದುಕೊಂಡು ಹೋಗುವಂತೆ ಕೇಳಿದ್ದಾಳೆ. ಆದರೆ ಪತಿ ಇದಕ್ಕೆ ನಿರಾಕರಿಸಿದ್ದಾನೆ. ಇದರಿಂದ ಪದ್ಮಜಾ ಅಸಮಾಧಾನಗೊಂಡು ಮಗುವಿನ ಸಮೇತ ಕಟ್ಟಡದಿಂದ ಹಾರಿದ್ದಾಳೆ. ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಪದ್ಮಜಾ ಮೃತಪಟ್ಟಿದ್ದಾಳೆ ಎಂದು ಎಸ್ಐ ಲಕ್ಷಿನಾರಾಯಣ ಅವರು ತಿಳಿಸಿದ್ದಾರೆ.
ದಂಪತಿಯ ಮಧ್ಯೆ ಬೇರೆ ಯಾವುದೇ ಸಮಸ್ಯೆಗಳಿಲ್ಲ. ಇತ್ತೀಚೆಗಷ್ಟೆ ರಜಾ ದಿನದಲ್ಲಿ ಶ್ರೀಲಂಕಾ ಪ್ರವಾಸ ಹೋಗಿ ಸಂತೋಷದಿಂದ ಇದ್ದರು. ಸದ್ಯಕ್ಕೆ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.