ಬೀಜಿಂಗ್: ಕೆಲವೇ ಸೆಕೆಂಡ್‍ಗಳ ಅಂತರದಲ್ಲಿ ಮಹಿಳೆಯೊಬ್ಬರ ಮೇಲೆ ಎರಡು ಬಾರಿ ಕಾರು ಹರಿದ ಘಟನೆ ಚೀನಾದಲ್ಲಿ ನಡೆದಿದೆ. ಅದರಲ್ಲೂ ಎರಡು ಬಾರಿ ಕಾರು ಮೈ ಮೇಲೆ ಹರಿದರೂ ಮಹಿಳೆಗೆ ಯಾವುದೇ ಗಂಭೀರ ಗಾಯಗಳಾಗದೆ ಬದುಕುಳಿದಿದ್ದಾರೆ.
ಚೀನಾದ ಲಿಯಾನ್‍ಯುನ್‍ಗ್ಯಾಂಗ್ ನಲ್ಲಿ ಡಿಸೆಂಬರ್ 27ರಂದು ಈ ಘಟನೆ ನಡೆದಿದೆ. ಅಪಘಾತಕ್ಕೀಡಾದ ಮಹಿಳೆಯನ್ನು ನ್ಯಾನ್ ಎಂದು ಗುರುತಿಸಲಾಗಿದೆ. ಈಕೆ ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಕೂಡಲೇ ಕೆಳಗಿಳಿದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ರಸ್ತೆಯಲ್ಲಿ ಹೋಗ್ತಿದ್ದ ಸಾಕಷ್ಟು ಜನ ಅಲ್ಲಿಗೆ ಧಾವಿಸಿ ಕಾರನ್ನ ಕೈಯ್ಯಿಂದ ಮೇಲೆತ್ತಿ ಮಹಿಳೆಯನ್ನ ರಕ್ಷಿಸಿದ್ದಾರೆ.
ಆದ್ರೆ ರಕ್ಷಣೆ ಮಾಡಿದ ಕೆಲವೇ ಸೆಕೆಂಡ್‍ಗೆ ಕಾರ್ ಮತ್ತೆ ಮುಂದೆ ಬಂದಿದ್ದು ಮತ್ತೊಮ್ಮೆ ಮಹಿಳೆಯ ಮೇಲೆ ಹರಿದಿದೆ. ಚಾಲಕ ಕಾರಿನ ಹ್ಯಾಂಡ್‍ಬ್ರೇಕ್ ಎಳೆಯುವುದನ್ನು ಮರೆತಿದ್ದು, ಕಾರಿನಲ್ಲಿ ಕುಳಿತಿದ್ದ ಮಗು ಆಕಸ್ಮಿಕವಾಗಿ ಕಾರನ್ನ ಸ್ಟಾರ್ಟ್ ಮಾಡಿ ಈ ಅವಘಡ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ದೈಶ್ಯಾವಳಿ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಿಂದಾಗಿ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
https://www.youtube.com/watch?v=lLd241FhmYc