Crime
ಮಹಿಳೆಯನ್ನ ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ರು!

ಪಾಟ್ನಾ: ಯುವಕನೊಬ್ಬನ ಕೊಲೆಗೈದಿದ್ದಾಳೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಬಿಹಾರದ ಬೈಯ್ಯಾ ಪಟ್ಟಣದಲ್ಲಿ ನಡೆದಿದೆ.
ವಿಮ್ಲೇಶ್ ಸಾವ್ ಕೊಲೆಯಾದ ಯುವಕ. ಈತನ ಮೃತದೇಹ ಇಂದು ಬೆಳಗ್ಗೆ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ಯುವಕನ ಕೊಲೆ ವಿಚಾರಕ್ಕೆ ಭೋಜ್ಪರಿ ಜಿಲ್ಲೆಯ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಜನರು ಅಂಗಡಿಗಳು ಮತ್ತು ಪೊಲೀಸ್ ವಾಹನಗಳು ಸೇರಿದಂತೆ ಅನೇಕ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.
ಗ್ರಾಮಸ್ಥರು ಈ ಯುವಕನ ಕೊಲೆ ಕೇಸಿನಲ್ಲಿ ಮಹಿಳೆಯ ಕೈವಾಡವಿದೆ ಎಂದು ಶಂಕಿಸಿ, ಆಕೆಯನ್ನು ಮನೆಯಿಂದ ಹೊರಗೆ ಎಳೆದು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯನ್ನು ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೆಷನ್ ಆಫೀಸರ್, ಸರ್ಕಾರಿ ರೈಲ್ವೆ ಇನ್ ಚಾರ್ಚ್ ಆಫೀಸರ್ ಸೇರಿದಂತೆ ಒಟ್ಟು 8 ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದ್ದು, ಪ್ರಕರಣದ ತನಿಖೆಯನ್ನು ಭೋಜ್ಪುರ ಪೊಲೀಸ್ ಠಾಣೆಯ ಮೇಲ್ವಿಚಾರಕ ಅವಕಾಶ್ ಕುಮಾರ್ ಅವರಿಗೆ ವಹಿಸಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದೇ ವೇಳೆ ತನ್ನ ಮೇಲೆ ಕೇಳಿ ಬಂದಿರುವ ಆರೋಪವನ್ನ ಮಹಿಳೆ ತಳ್ಳಿಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
