– ಕೊಲೆ ಮಾಡಿದ ಪಿಸ್ತೂಲ್‍ನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
– ಮೂರು ಬಾರಿ ಗುಂಡು ಹಾರಿಸಿದ ಪಾಗಲ್ ಪ್ರೇಮಿ
ನವದೆಹಲಿ: ರಾತ್ರೋರಾತ್ರಿ ಮಹಿಳಾ ಎಸ್‍ಐ ಪ್ರೀತಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದೀಪಾಂಶು ರತಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. 2018ರಲ್ಲಿ ಪ್ರೀತಿ ಹಾಗೂ ದೀಪಾಂಶು ದೆಹಲಿ ಪೊಲೀಸ್ ಸೇರಿದ್ದು, ಇಬ್ಬರು ಬ್ಯಾಚ್‍ಮೇಟ್ ಆಗಿದ್ದರು. ಶುಕ್ರವಾರ ರಾತ್ರಿ ಪ್ರೀತಿ ಅವರನ್ನು ಕೊಲೆ ಮಾಡಿದ ಬಳಿಕ ದೀಪಾಂಶು ಹರ್ಯಾಣದ ಸೋನಿಪತ್ ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಯನ್ನು ಕೊಲೆ ಮಾಡಿದ ಪಿಸ್ತೂಲಿನಲ್ಲಿಯೇ ದೀಪಾಂಶು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಗುಂಡಿಟ್ಟು ಮಹಿಳಾ ಎಸ್‍ಐ ಹತ್ಯೆ
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ದೀಪಾಂಶು ಪಿಎಸ್‍ಐ ಆಗಿದ್ದು, ಪ್ರೀತಿ ಜೊತೆ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ದ. ಆದರೆ ಪ್ರೀತಿ ಆತನನ್ನು ಪ್ರೇಮ ನಿವೇದನೆಯನ್ನು ತಿರಸ್ಕರಿಸಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ದೀಪಾಂಶು ಗುಂಡಿಕ್ಕಿ ಆಕೆಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅಲ್ಲಿಂದ ಪರಾರಿ ಆಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
Advertisement
Advertisement
ನಡೆದಿದ್ದೇನು?
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಮಹಿಳಾ ಎಸ್‍ಐ ಪ್ರೀತಿ ಅಲ್ಲಾವತ್ ಮೇಲೆ ದೀಪಾಂಶು ಗುಂಡಿಕ್ಕಿ ಹತ್ಯೆ ಮಾಡಿದ್ದ. ನಗರದ ಪಾಟ್‍ಪರ್ಗಂಜ್ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪ್ರೀತಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿ ಪ್ರೀತಿ ತನ್ನ ಡ್ಯೂಟಿ ಮುಗಿಸಿಕೊಂಡು ಮೆಟ್ರೋದಲ್ಲಿ ರೋಹಿಣಿ ಮೆಟ್ರೋ ಸ್ಟೇಷನ್‍ಗೆ ಹೋಗಿದ್ದರು. ನಿಲ್ದಾಣದಿಂದ ಇಳಿದು ಮನೆಗೆ ನಡೆದುಕೊಂಡು 50 ಮೀ. ದೂರ ಹೋಗುತ್ತಿದ್ದಂತೆ ದೀಪಾಂಶು ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ದೀಪಾಂಶು ಮೂರು ಬಾರಿ ಗುಂಡು ಹಾರಿಸಿದ್ದು, ಎರಡು ಬಾರಿ ಪ್ರೀತಿಗೆ ತಗುಲಿದೆ. ಮೂರನೇ ಬಾರಿ ಬುಲೆಟ್ ಪ್ರೀತಿ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಹಿಂದಿನ ಗ್ಲಾಸ್‍ಗೆ ತಗುಲಿದೆ. ಬುಲೆಟ್ ಪ್ರೀತಿ ತಲೆಗೆ ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Delhi: A Sub-Inspector of Delhi Police – Preeti, posted in Patparganj Industrial Area Police Station, was found dead with multiple bullet injuries in Rohini area, earlier tonight. Forensic team and Police are present at the spot. pic.twitter.com/1tRejhCpjV
— ANI (@ANI) February 7, 2020
ಪ್ರೀತಿಯನ್ನು ಕೊಲೆ ಮಾಡಿದ ನಂತರ ದೀಪಾಂಶು ಅಲ್ಲಿಂದ ಪರಾರಿಯಾಗಿದ್ದ. ಘಟನೆಯನ್ನು ನೋಡಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಆಗಿರುವುದನ್ನು ಖಚಿತ ಪಡಿಸಿದ್ದಾರೆ. ಕೂಡಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದರು.
ಕೊಲೆಯಾದ ಸ್ಥಳದಿಂದ ಪ್ರೀತಿಯ ಮನೆ ಸ್ವಲ್ಪ ದೂರದಲ್ಲೇ ಇತ್ತು. ಸೋನಿಪತ್‍ನ ನಿವಾಸಿಯಾಗಿರುವ ಪ್ರೀತಿ ರೋಹಿಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಈ ವೇಳೆ ಆರೋಪಿ ಒಬ್ಬನೇ ಇರುವುದು ಗೊತ್ತಾಗಿತ್ತು. ಸಿಸಿಟಿವಿ ನೋಡಿ ಪೊಲೀಸರು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲೇ ದೀಪಾಂಶು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.