Connect with us

Crime

ಬೀಳುತ್ತಿರೋ ಧ್ವಜಕಂಬ ತಪ್ಪಿಸಲು ಹೋಗಿ ಎರಡೂ ಕಾಲುಗಳಿಗೆ ಗಂಭೀರ ಗಾಯ

Published

on

ಚೆನ್ನೈ: ತಮಿಳುನಾಡಿನ ಕೊಯಂಬತ್ತೂರಿನ ಹೆದ್ದಾರಿಯಲ್ಲಿ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ 30 ವರ್ಷದ ಮಹಿಳೆಗೆ ಟ್ರಕ್ ಗುದ್ದಿದ್ದು, ಪರಿಣಾಮ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಅನುರಾಧ ರಾಜೇಶ್ವರಿ ವ್ಯವಹಾರ ಆಡಳಿತ ಪದವೀಧರೆಯಾಗಿದ್ದು, ಸೋಮವಾರ ಬೆಳಗ್ಗೆ ಎಂದಿನಂತೆ ತನ್ನ ಸ್ಕೂಟಿಯಲ್ಲಿ ಕಚೇರಿಗೆ ತೆರಳುತ್ತಿದ್ದಳು. ಹೀಗೆ ಹೋಗುತ್ತಿದ್ದ ವೇಳೆ ಎಐಎಡಿಎಂಕೆ ಪಕ್ಷದ ಧ್ವಜಕಂಬ ತನ್ನ ಮೇಲೆ ಬೀಳುತ್ತಿದೆ ಎಂಬುದನ್ನು ಅರಿತು ಅದನ್ನು ತಪ್ಪಿಸಿ ಮುಂದೆ ಸಾಗಲು ರಾಜೇಶ್ವರಿ ಯತ್ನಿಸಿದ್ದಾಳೆ. ಈ ವೇಳೆ ವೇಗವಾಗಿ ಬಂದ ಟ್ರಕ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್ ನ ಮುಂದಿನ ಬಲಬದಿಯ ಚಕ್ರ ಎರಡೂ ಕಾಲುಗಳ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ರಾಜೇಶ್ವರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಟ್ರಕ್ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ದುರ್ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಶ್ವರಿ ತಂದೆ-ತಾಯಿಗೆ ಒಬ್ಬಳೇ ಮಗಳಾಗಿದ್ದು, ಹೆತ್ತವರಿಗೆ ಆಸರೆಯಾಗಿದ್ದಳು. ಇದನ್ನೂ ಓದಿ: ತಲೆ ಮೇಲೆ ಬ್ಯಾನರ್ ಬಿದ್ದು 23 ವರ್ಷದ ಟೆಕ್ಕಿ ಸಾವು

ರಾಜೇಶ್ವರಿಗೆ ಡಿಕ್ಕಿ ಹೊಡೆದು ಆಕೆಯನ್ನು ಗಂಭೀರ ಗಾಯಗೊಳಿಸಿದ್ದಲ್ಲದೇ ಟ್ರಕ್ ಚಾಲಕ ಮತ್ತೊಬ್ಬ ವ್ಯಕ್ತಿಗೂ ಡಿಕ್ಕಿ ಹೊಡೆದಿದ್ದಾನೆ. ವ್ಯಕ್ತಿ ತನ್ನ ಸೈಕಲ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ವ್ಯಕ್ತಿಯ ಕೈ ಹಾಗೂ ಮೊಣಕಾಲಿಗೆ ಗಾಯಗಳಾಗಿವೆ.

ಟೆಕ್ಕಿ ಮೇಲೆ ಬ್ಯಾನರ್ ಬಿದ್ದು ಸಾವನ್ನಪ್ಪಿದ ನಂತರ ಇದು ಎರಡನೇ ಘಟನೆಯಾಗಿದೆ. ಮುಖ್ಯಮಂತ್ರಿ ಪನೀರ್ ಸೆಲ್ವಂ ಅವರು ಸೋಮವಾರ ಕೊಯಂಬತ್ತೂರಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸುವ ಸಲುವಾಗಿ ಅವಿನಾಶಿ ಹೆದ್ದಾರಿಯಲ್ಲಿ ಈ ಧ್ವಜಗಳನ್ನು ಹಾಕಲಾಗಿದ್ದು, ಆದರೆ ಇದನ್ನು ಪೊಲೀಸರು ಮುಚ್ಚಿಡುತ್ತಿದ್ದಾರೆ ಎಂದು ರಾಜೇಶ್ವರಿ ಅಂಕಲ್ ಶಿವನ್ ಆರೋಪಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಬದಿಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಬ್ಯಾನರ್ ಗಳನ್ನು ಅಳವಡಿಸಬಾರದೆಂದು ಮದ್ರಾಸ್ ಹೈಕೋರ್ಟ್ ಆದೇಶ ಮಾಡಿತ್ತು. ಆದರೆ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷರ ಭೇಟಿ ವೇಳೆ ಬ್ಯಾನರ್ ಹಾಕಲು ಅನುಮತಿ ಪಡೆದಿದ್ದರು.

ಮಾಲೀಕರು ಬೇಗ ಬರುವಂತೆ ಹೇಳಿದ್ದರು. ಹೀಗಾಗಿ ಬೇಗ ತಲುಪಲು ಗಾಡಿಯನ್ನು ವೇಗವಾಗಿ ಚಲಾಯಿಸಿದ್ದೇನೆ. ರಸ್ತೆ ಬದಿಯಲ್ಲಿ ಮರಳಿನ ದಿಬ್ಬ ಮಾಡಿ ಧ್ವಜಕಂಬಗಳನ್ನು ಹಾಕಲಾಗಿತ್ತು. ಇತ್ತ ನೇರವಾಗಿ ತಲುಪಲು ಬೇರೆ ದಾರಿಗಳಿರಲಿಲ್ಲ ಎಂದು ಚಾಲಕ ಹೇಳಿದ್ದಾನೆ. ಸದ್ಯ ಚಾಲಕನ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *