ವೆಲ್ಲಿಂಗ್ಟನ್: ಪ್ರಿಯಕರನ ಪ್ರಾಣ ಉಳಿಸಲು ಪ್ರಿಯತಮೆ ಆತನ ಗಂಟಲನ್ನೇ ಕತ್ತರಿಸಿದ ಘಟನೆ ನ್ಯೂಜಿಲೆಂಡ್‍ನಲ್ಲಿ ನಡೆದಿದೆ.
ಹೌದು. ನಂಬಲಸಾಧ್ಯವಾದ್ರೂ ಇದು ನಿಜ. ಸಾರಾ ಗ್ಲಾಸ್ ಹಾಗೂ ಐಸಾಕ್ ಬೆಸ್ಟರ್ ಊಟಕ್ಕೆಂದು ಹೋಟೆಲ್‍ಗೆ ಹೋಗಿದ್ದರು. ಹೋಟೆಲ್‍ನಲ್ಲಿ ಬಾರ್ಬೆಕ್ಯೂ ಆರ್ಡರ್ ಮಾಡಿದ್ದಾರೆ. ಐಸಾಕ್ ತನ್ನ ಸಾಮಥ್ರ್ಯಕಿಂತ ಹೆಚ್ಚು ಮಾಂಸವನ್ನ ಬಾಯಿಯಲ್ಲಿ ಹಾಕಿಕೊಂಡಿದ್ದ. ಆಹಾರವನ್ನು ಒಂದೇ ಸಮನೆ ಬಾಯಿಗೆ ಹಾಕಿದ ಮೇಲೆ ಐಸಾಕ್ ಅದನ್ನು ಜಗಿಯಲು ಸಾಧ್ಯವಾಗದೇ ಒದ್ದಾಡಿದ್ದ. ಮಾಂಸದ ತುಂಡು ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲಾಗದೇ ಐಸಾಕ್ ಒದ್ದಾಡುತ್ತಿದ್ದನು.
ಐಸಾಕ್‍ನ ಆ ಸ್ಥಿತಿ ನೋಡಿ ಹೋಟೆಲ್‍ನಲ್ಲಿದ್ದ ಅಕ್ಕಪಕ್ಕದ ಟೇಬಲ್‍ನವರು ಆತನ ಸಹಾಯಕ್ಕೆ ಬಂದರು. ಆತನ ಹೊಟ್ಟೆ ಮೇಲೆ ಒತ್ತಡ ಹಾಕಿ ಗಂಟಲಲ್ಲಿದ್ದ ಮಾಂಸದ ತುಂಡನ್ನು ಹೊರತೆಗೆಯಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗೆ ಇದ್ದರೆ ಐಸಾಕ್ ಬದುಕುಳಿಯುವುದು ಕಷ್ಟವೆಂದು ತಿಳಿದ ಸಾರಾ ದೃಢ ನಿರ್ಧಾರವನ್ನು ಕೈಗೊಂಡರು.
ವೃತಿಯಲ್ಲಿ ಸೂಲಗಿತ್ತಿಯಾಗಿದ್ದ ಸಾರಾ ತನ್ನ ಬಾಯ್‍ಫ್ರೆಂಡ್ ಐಸಾಕ್‍ನನ್ನು ಉಳಿಸಲು ಆತನ ಗಂಟಲನ್ನು ಶ್ವಾಸನಾಳದ ಬಳಿ ಸಣ್ಣಗೆ ಕತ್ತರಿಸಿದ್ದಳು. ಐಸಾಕ್ ಗಂಟಲನ್ನು ಕತ್ತರಿಸಿದಕ್ಕೆ ಆತನಿಗೆ ಉಸಿರಾಡಲು ಸಾಧ್ಯವಾಯಿತು. ನಂತರ ವೈದ್ಯಕೀಯ ಸಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ಐಸಾಕ್ ಗೆ ಆಕ್ಸಿಜನ್ ಅಳವಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ನನಗೆ ಬೇರೆ ಯಾವುದೇ ದಾರಿ ಇರಲಿಲ್ಲ. ನಾನು ಈ ರೀತಿ ಮಾಡದಿದ್ದರೆ ಐಸಾಕ್ ಬದುಕುತ್ತಿರಲಿಲ್ಲ. ನಾನೇ ಅಲ್ಲ, ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಮ್ಮವರ ಪ್ರಾಣ ಉಳಿಸಲು ಈ ರೀತಿ ಮಾಡುತ್ತಿದ್ದರು ಎಂದು ಸಾರಾ ತಿಳಿಸಿದ್ದಾರೆ.
ವೈದ್ಯರು ಸ್ಥಳಕ್ಕೆ 20 ನಿಮಿಷಗಳ ಬಳಿಕ ಬಂದು ಐಸಾಕ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಸಂಪೂರ್ಣವಾಗಿ ಗುಣವಾದ ನಂತರ ಐಸಾಕ್‍ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ತನ್ನ ಪ್ರಿಯಕರನನ್ನು ಉಳಿಸಲು ಸಾರಾ ಈ ನಿರ್ಧಾರ ತೆಗೆದುಕೊಳ್ಳಲಿಲ್ಲವೆಂದರೆ ಐಸಾಕ್ ಉಳಿಯುವುದು ಕಷ್ಟವಾಗುತ್ತಿತ್ತು ಎಂದು ಹೇಳಲಾಗಿದೆ.