ಭೋಪಾಲ್: ಯುವಕನೊಬ್ಬ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮದುವೆಯಾಗಲೆಂದು ಬರೋಬ್ಬರಿ 6.74 ಲಕ್ಷ ಹಣ ಕದ್ದು, ಬಳಿಕ ಅದನ್ನು ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ನಲ್ಲಿ ನಡೆದಿದೆ.
ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಜಿತೇಂದ್ರ ಗೋಯಲ್ ಪ್ರೀತಿಗಾಗಿ ಬರೋಬ್ಬರಿ 5 ಲಕ್ಷ ರೂ. ಹಣವನ್ನು ಸುಟ್ಟು ಹಾಕಿದ್ದಾನೆ. ಸದ್ಯಕ್ಕೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಘಟನೆ ವಿವರ?: ಗೋಯಲ್ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮದುವೆಯಾಗುವ ಉದ್ದೇಶದಿಂದ ಕಂಪನಿಯಿಂದ ಬರೋಬ್ಬರಿ 6.74 ಲಕ್ಷ ಹಣ ಕದ್ದಿದ್ದಾನೆ. ಆದರೆ ಹಣ ಕದ್ದ ನಂತರ ಜಿತೇಂದ್ರ ಆಕೆಯ ಬಳಿ ಹೋಗಿ ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಯುವತಿ ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗೋಯಲ್ 5 ಲಕ್ಷ ರೂ. ಹಣ ಸುಟ್ಟು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ನಿರಂಜನ್ ಶರ್ಮಾ ಹೇಳಿದ್ದಾರೆ.
ಇತ್ತ ಹಣ ಕಳ್ಳತನ ನಡೆದ ಬಗ್ಗೆ ಮಾಹಿತಿ ತಿಳಿದ ಕಂಪನಿ ಮ್ಯಾನೇಜರ್ ತಕ್ಷಣವೇ ನಸುರುಲ್ಲಾಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ಯಾಷಿಯರ್ ಗೋಯಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಈಗ ನಸುರುಲ್ಲಾಗಂಜ್ ಪೊಲೀಸ್ ಠಾಣೆಯಲ್ಲಿ ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಪೊಲೀಸರು ಆತನಿಂದ ಸುಟ್ಟ 5 ಲಕ್ಷ ರೂ. ಹಣ ಮತ್ತು ಉಳಿದ ಹಣವನ್ನು ಲಾಕರ್ ನಲ್ಲಿ ಇಟ್ಟಿದ್ದ ಮಾಹಿತಿ ತಿಳಿದು ಅದನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮದುವೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಎಂದು ತಿಳಿದುಬಂದಿದೆ.