ಪುರುಷರು ಮನೆಯಲ್ಲೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ – ಮಹಿಳೆಯ ವಿಡಿಯೋ ವೈರಲ್

Public TV
2 Min Read
Still 2 e1575548163811

ನವದೆಹಲಿ: ಮಹಿಳೆಯರು ಮನೆಯ ಒಳಗಿರುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಬದಲಿಗೆ ಪುರುಷರು ಮನೆಯಲ್ಲಿದ್ದರೆ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ ಎಂದು ಮಹಿಳೆಯೊಬ್ಬರು ಪ್ರತಿಭಟಿಸಿ, ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ನತಾಶಾ ಎಂಬುವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಭಾರತೀಯ ಮಹಿಳೆಯ ಧ್ವನಿ ಇದಾಗಿದೆ. ನಮಗೆ ಪುರುಷರು ಸುರಕ್ಷತೆ ನೀಡುವುದು ಬೇಕಾಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪುರುಷರೇ ಕಾರಣ. ನೀವು ಮನೆಯ ಒಳಗಿದ್ದರೆ ಇಡೀ ಜಗತ್ತೇ ಮುಕ್ತವಾಗಿರುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಇವರ ಹೇಳಿಕೆಯನ್ನು ಎಷ್ಟು ದಿನಗಳ ಕಾಲ ನಾವು ನಿರ್ಲಕ್ಷಿಸಬಹುದು ಎಂದು ನತಾಶಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಈ ವಿಡಿಯೋದಲ್ಲಿ ವಯಸ್ಕ ಮಹಿಳೆಯೊಬ್ಬರು ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದ್ದು, ಅದರಲ್ಲಿ ಅವಳು ಅತ್ಯಾಚಾರವಾದಳು, ಅವಳನ್ನು ಅತ್ಯಾಚಾರಗೈದ ಎಂದು ಬರೆದಿದೆ. ಇದರಲ್ಲಿ ಅವಳು ಅತ್ಯಾಚಾರವಾದಳು ಎಂಬ ಸಾಲುಗಳಿಗೆ ತಪ್ಪು ಎಂದು ಚಿಹ್ನೆ ಹಾಕಲಾಗಿದೆ. ಅವಳನ್ನು ಅತ್ಯಾಚಾರಗೈದ ಎಂಬುದಕ್ಕೆ ಸಹಿ ಚಿಹ್ನೆ ಹಾಕಲಾಗಿದೆ. ಅಲ್ಲದೆ ಹ್ಯಾಶ್‍ಟ್ಯಾಗ್‍ನೊಂದಿಗೆ ಚೇಂಜ್ ದಿ ನರೇಟಿವ್ ಎಂದು ಇನ್ನೊಂದು ಭಿತ್ತಿ ಪತ್ರದಲ್ಲಿ ಬರೆಯಲಾಗಿದೆ.

ಈ ಮೂಲಕ ಮಹಿಳೆಯು ಸಂದೇಶ ರವಾನಿಸಿದ್ದು, ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಿಲ್ಲ. ಬದಲಿಗೆ ಅವಳನ್ನು ಅತ್ಯಾಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಂಜೆ 7ರ ನಂತರ ಮಹಿಳೆಯೇ ಯಾಕೆ ಮನೆಯಲ್ಲಿರಬೇಕು? ಪುರುಷರು ಏಕೆ ಇರಬಾರದು ಇದನ್ನು ಸ್ಪಷ್ಟಪಡಿಸಬೇಕು. ಎಲ್ಲ ಪುರುಷರು ಸಂಜೆ 7 ಗಂಟೆಯೊಳಗೆ ಮನೆಗೆ ಸೇರಿ ಬೀಗ ಹಾಕಿಕೊಳ್ಳಿ. ಆಗ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ, ಮಹಿಳೆಯರು ಸುರಕ್ಷಿತವಾಗಿರುತ್ತಾರೆ. ಪೊಲೀಸರು ನಮಗೆ ಸುರಕ್ಷತೆ ನೀಡಲು ಮುಂದಾಗುತ್ತಾರೆ. ಆದರೆ ನಮಗೆ ನೀಡುವ ಬದಲು ನಮ್ಮ ಸಹೋದರರು, ಪುರುಷರಿಗೆ ಸುರಕ್ಷತೆ ನೀಡಬೇಕು. ಏಕೆಂದರೆ ಅವರಿಂದಲೇ ಸಮಸ್ಯೆಯಾಗುತ್ತಿದೆ. ಪುರುಷರು ಮನೆಯ ಒಳಗಡೆ ಇದ್ದರೆ ಇಡೀ ಜಗತ್ತೇ ಮುಕ್ತವಾಗಿರುತ್ತದೆ, ಮಹಿಳೆಗೆ ಯಾವುದೇ ಆತಂಕ ಇರುವುದಿಲ್ಲ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದಾರೆ.

ಈ ವಿಡಿಯೋ ಇಂಟರ್ ನೆಟ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವರು ಈ ಕುರಿತು ಸಮರ್ಥನೆ ಮಾಡಿಕೊಂಡಿದ್ದು, ಭಾರತದ ಎಲ್ಲ ಮಹಿಳೆಯರ ಭಾವನೆಯನ್ನು ಇವರು ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *