ಚಿಕ್ಕಮಗಳೂರು. ಶೀಲದ ಬಗ್ಗೆ ಎಲ್ಲರ ಬಳಿಯೂ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬಳು ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಧರ್ಮದೇಟು ಕೊಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಜಯಪರದ ಸುಂದರೇಶ್ ಅದೇ ಊರಿನ ಶೋಭಾ(ಹೆಸರು ಬದಲಾಯಿಸಲಾಗಿದೆ) ಎಂಬವರ ಶೀಲದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದನು. ಆಕೆ ಸರಿ ಇಲ್ಲ ಎಂದು ಶೀಲದ ಬಗ್ಗೆ ಶಂಕಿಸಿ ಕರಪತ್ರ ಮಾಡಿಸಿ ಗ್ರಾಮಸ್ಥರ ಮನೆ ಬಾಗಿಲಿಗೂ ಅಂಟಿಸಿದ್ದನು. ಈ ಬಗ್ಗೆ ಶೋಭಾ ಜಯಪುರ ಠಾಣೆಗೆ ದೂರು ನೀಡಿದ್ದಳು.
ಜಯಪುರ ಪೊಲೀಸರು ಆತನನ್ನ ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಬೇಲ್ ಮೇಲೆ ಬಂದ ಸುಂದರೇಶ್ ಮತ್ತೆ ಅದೇ ಕೆಲಸ ಮಾಡುತ್ತಿದ್ದನು. ಅಲ್ಲದೇ ದಾರಿ ಮಧ್ಯೆ ಸಿಕ್ಕವರಿಗೆಲ್ಲಾ ಅವಳು ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದನು. ಈ ರೀತಿ ಮಾಡಬೇಡ ಎಂದು ಶೋಭಾ ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದಳು. ಆದರೆ ಸಂದರೇಶ್ ಮತ್ತದೇ ಕೆಲಸ ಮಾಡುತ್ತಿದ್ದನು.
ಇದರಿಂದ ಆಕ್ರೋಶಗೊಂಡ ಶೋಭಾ ದಾರಿ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ನನ್ನ ಬಗ್ಗೆ ಏಕೆ ಮಾತನಾಡೋದು, ನಾನು ಸರಿ ಇಲ್ಲ ಅನ್ನೋದನ್ನ ನೀನು ನೋಡಿದ್ದೀಯಾ ಎಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ.